

ಹುಬ್ಬಳ್ಳಿ: ಸಾರಿಗೆ ನೌಕರರ ತಾಳ್ಮೆಯನ್ನು ರಾಜ್ಯ ಸರ್ಕಾರ ದೌರ್ಬಲ್ಯವೆಂದುಕೊಂಡಿದೆ. ತಕ್ಕ ಪಾಠ ಕಲಿಸಲು ಆ. 5ರಂದು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಎಲ್ಲ ನೌಕರರು ಸಿದ್ಧರಾಗಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ಅಧ್ಯಕ್ಷ ಡಾ.ಕೆ.ಎಸ್. ಶರ್ಮಾ ತಿಳಿಸಿದರು.
ಇಲ್ಲಿಯ ಗೋಕುಲ ರಸ್ತೆಯ ಡಾ.ಕೆ.ಎಸ್. ಶರ್ಮಾ ವಿಶ್ವಶ್ರಮಚೇತನ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಕಾನೂನಾತ್ಮಕವಾಗಿ ನೋಟಿಸ್ ನೀಡಿ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜನಪರವಾಗಿದ್ದರೆ ಈಗಾಗಲೇ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳನ್ನು ಕರೆದು ಮಾತುಕತೆ ನಡೆಸಬೇಕಿತ್ತು. ಆದರೆ, ಸರ್ಕಾರ ಸಾರಿಗೆ ನೌಕರರನ್ನು ಇಷ್ಟೊಂದು ನಿರ್ಲಕ್ಷೃದಿಂದ ಕಾಣುತ್ತಿರುವುದು ಕಾರ್ಮಿಕ ವಿರೋಧಿ ನಡೆಯಾಗಿದೆ. ಮುಷ್ಕರದಲ್ಲಿ ನೌಕರರು ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿ ಯಶಸ್ವಿಗೊಳಿಸಬೇಕು. ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿವಳಿಕೆ ಮೂಡಿಸಿ ಬೆಂಬಲ ಕೋರುವಂತೆ ಪದಾಧಿಕಾರಿಗಳಿಗೆ ಸೂಚಿಸಿದರು.
ಮಹಾ ಪ್ರಧಾನ ಕಾರ್ಯದರ್ಶಿ ಬಿ. ಜಯ ದೇವರಾಜೇ ಅರಸು ಮಾತನಾಡಿ, ನಾವು ಮುಷ್ಕರಕ್ಕೆ ಹೊರಟಿದ್ದೇವೆ. ಎಸ್ಮಾಗೆ ಯಾರೂ ಹೆದರಬೇಕಾಗಿಲ್ಲ. ಬಂಧಿಸುವುದಾದರೆ ಎಲ್ಲ ನೌಕರರನ್ನು ಬಂಧಿಸಲಿ ಎಂದು ಸವಾಲು ಹಾಕಿದರು.
ಎನ್.ಆರ್. ದೇವರಾಜೇ ಅರಸು ಮಾತನಾಡಿದರು. ಪ್ರಮುಖರಾದ ಜಿ. ಪ್ರಕಾಶಮೂರ್ತಿ, ಬಸವರಾಜ ಕಣ್ಣಿ, ಚಂದ್ರಕಾಂತ ಗದ್ದಿಗೆ, ವಿ.ಎಸ್. ಹಿರೇಮಠ, ನಾರಾಯಣ ಸ್ವಾಮಿ, ಅರ್ಜುನ ಒಂಟಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖರು ಆಗಮಿಸಿದ್ದರು.
ಎಸ್ಮಾ ಜಾರಿ ಒಳ್ಳೆಯ ಲಕ್ಷಣವಲ್ಲ
ಹುಬ್ಬಳ್ಳಿ: ಎಸ್ಮಾ ಕಾಯ್ದೆ ಜಾರಿ ಮಾಡುವುದು ಒಳ್ಳೆಯ ಸರ್ಕಾರದ ಲಕ್ಷಣವಲ್ಲ. ವೇತನ ಪರಿಷ್ಕರಣೆಯಂತಹ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರದ ನಿರ್ಲಕ್ಷೃ ಸರಿಯಲ್ಲ. ಈ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಆ. 5ರಂದು ಸಾರಿಗೆ ನೌಕರರ ಅನಿರ್ದಿವಾಧಿ ಮುಷ್ಕರ ನಡೆಸುವುದು ನಿಶ್ಚಲ ಎಂದು ಕೆ.ಎಸ್.ಶರ್ಮಾ ತಿಳಿಸಿದರು.