

ಉಡುಪಿ: ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಂಯುಕ್ತ ಕಾರ್ಯಾಚರಣೆಯಲ್ಲಿ ನಗರದ ವಿವಿಧೆಡೆ ಕೂಲಿ ಕೆಲಸಕ್ಕಾಗಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಗುರುವಾರ ಬೆಳಗ್ಗೆ ಸಿಟಿ ಬಸ್ ನಿಲ್ದಾಣ ಬಳಿಯಿಂದ ಉತ್ತರ ಕರ್ನಾಟಕದ ಕಾರ್ಮಿಕರನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಲು ಗೂಡ್ಸ್ ವಾಹನಗಳಿಗೆ ಹತ್ತಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಕಾನೂನು ಬಾಹಿರವಾಗಿ ಜನರನ್ನು ಸಾಗಾಟ ತಡೆದು, 2 ಪಿಕಪ್ ವಾಹನ, 407 ಟೆಂಪೋ 1 ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿದ ಕಾರ್ಮಿಕ ಅಧಿಕಾರಿ ಕುಮಾರ್, ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಕಾನೂನು ಬಾಹಿರವಾಗಿ ಗೂಡ್ಸ್ ವಾಹನಗಳಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಗೂಡ್ಸ್ ವಾಹನಗಳಲ್ಲಿ ಮುಂಭಾಗದಲ್ಲಿ ಇಬ್ಬರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. ಹಿಂಬದಿ ಜನರನ್ನು ಕುಳ್ಳಿರಿಸಿ, ಆಕಸ್ಮಾತ್ ಏನಾದರೂ ಅವಡ ಸಂಭವಿಸಿದರೆ ಸಂತ್ರಸ್ತರಿಗೆ ಯಾವುದೇ ವಿಮಾ ಸೌಲಭ್ಯ ಲಭಿಸುವುದಿಲ್ಲ. ಅನೇಕ ವಾಹನ ಚಾಲಕರು ತಪ್ಪಿಸಿಕೊಂಡಿದ್ದಾರೆ. ಸಾರಿಗೆ ಇಲಾಖೆಗೆ ವಶಕ್ಕೆ ಪಡೆದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಥವಾ ಚಾಲಕರ ಚಾಲನಾ ಪರವಾನಿಗೆ ಅಮಾನತುಗೊಳಿಸಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಸಾರಿಗೆ ಇಲಾಖೆ ನಿರೀಕ್ಷಕ ಮಾರುತಿ ನಾಯಕ್, ಸಂಚಾರ ನಿರೀಕ್ಷಕ , ಕಾರ್ಮಿಕ ಇಲಾಖೆ ನಿರೀಕ್ಷಕರಾದ ವಿಜಯೇಂದ್ರ, ಸಂಜಯ್, ಸಿಬ್ಬಂದಿ ಶಿವಪ್ರಸಾದ್, ಸಂಗಯ್ಯ ಹಿರೇಮಠ ಉಪಸ್ಥಿತರಿದ್ದರು.