

ಮೈಸೂರು: ದೀಪಾವಳಿ ಸಂದರ್ಭ ರೈಲ್ವೆ ಸುರಕ್ಷತಾ ಕ್ರಮವನ್ನು ಉಲ್ಲಂಘಿಸಿ ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುತ್ತಿದ್ದ 47 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ತಿಳಿಸಿದರು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರು ಓಡಾಡುವ ಜತೆಗೆ ಬೆಂಕಿ ದುರಂತ ಸಂಭವಿಸುವಂತಹ ವಸ್ತುಗಳನ್ನು ಕೊಂಡೊಯ್ಯುವ ಪ್ರಕರಣ ತಡೆಯುವುದಕ್ಕಾಗಿ ನ.9ರಿಂದ 15ರವರೆಗೆ ವಿಶೇಷ ಸುರಕ್ಷತಾ ಅಭಿಯಾನ ನಡೆಸಲಾಗಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೈಲ್ವೆ ಅಧಿಕಾರಿಗಳು ಅಭಿಯಾನದ ಮೂಲಕ ಬೆಂಕಿ ಸುರಕ್ಷತಾ ಅಭಿಯಾನ ನಡೆಸಿ ರೈಲುಗಳಲ್ಲಿ ಯಾವುದೇ ಅಗ್ನಿ ಅನಾಹುತ, ದುರಂತ ಪ್ರಕರಣಗಳನ್ನು ತಡೆಯುವಲ್ಲಿ ಯಶಸ್ವಿಯಾಗುವ ಜತೆಗೆ, ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ತಂಡದಿಂದ ನಾಲ್ಕು, ಸಹಾಯಕ ರೈಲ್ವೆ ವ್ಯವಸ್ಥಾಪಕರ ತಂಡದಿಂದ ನಾಲ್ಕು, ಉಪ ಸಹಾಯಕ ರೈಲ್ವೆ ವ್ಯವಸ್ಥಾಪಕರ ತಂಡದಿಂದ 5, ಕಮರ್ಷಿಯಲ್ ಇನ್ಸ್‌ಪೆಕ್ಟರ್ ತಂಡ 12, ಟಿಕೆಟ್ ತಪಾಸಣಾ ಟೀಂನಿಂದ 19 ಸೇರಿ ಒಟ್ಟು 44 ಕಡೆ ತಪಾಸಣೆ ನಡೆಸಲಾಗಿತ್ತು. ಈ ವೇಳೆ ರೈಲ್ವೆ ಸಂರಕ್ಷಣಾ ದಳದಿಂದ ಮೂರು ಪ್ರಕರಣ, ಅಪಾಯಕಾರಿ ವಸ್ತುಗಳ ಸಾಗಣೆಯಲ್ಲಿ 11 ಪ್ರಕರಣಗಳು, ಸಿಗರೇಟ್ ಮತ್ತು ಧೂಮಪಾನ ಆ್ಯಕ್ಟ್‌ನಡಿ 33 ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಮೈಸೂರು ವಿಭಾಗಕ್ಕೆ ಒಳಪಡುವ ಮೈಸೂರು, ಹಾಸನ, ನಂಜನಗೂಡು, ಅರಸೀಕೆರೆ, ಬೀರೂರು, ಶಿವಮೊಗ್ಗ ಮತ್ತಿತರ 21 ನಿಲ್ದಾಣಗಳಲ್ಲಿ ಪಟಾಕಿ ಸಾಗಣೆ ಮಾಡಿದವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ವಿವರಿಸಿದರು.
81 ಲಕ್ಷ ರೂ. ದಂಡ ವಸೂಲಿ
ಇದೇ ವೇಳೆ ಟಿಕೆಟ್ ಇಲ್ಲದೆ ಪ್ರಯಾಣಿಸುವವರನ್ನು ತಪಾಸಣೆ ಮಾಡಲಾಗಿದೆ. ಅಕ್ಟೋಬರ್‌ನಲ್ಲಿ 81 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಟಿಕೆಟ್ ರಹಿತ ಪ್ರಯಾಣದ ಬಗ್ಗೆ ಅರಿವು ಮೂಡಿಸುತ್ತಿರುವ ಪರಿಣಾಮ ದಂಡದ ಪ್ರಕರಣ ಇಳಿಮುಖವಾಗಿದೆ ಎಂದು ಶಿಲ್ಪಿ ಅಗರವಾಲ್ ಹೇಳಿದರು.
ಕುಡಿದ ಮತ್ತಿನಲ್ಲಿ ದುಷ್ಕೃತ್ಯ ನಡೆಸಿದ್ದರು
ನಂಜನಗೂಡು-ಕಡಕೊಳ ನಡುವಿನ ರೈಲ್ವೆ ಹಳಿಯಲ್ಲಿ ಮರದ ತುಂಡು, ಕಬ್ಬಿಣದ ತಗಡು ಇರಿಸಿ ಅಪಘಾತ ಮಾಡಲು ಯತ್ನಿಸಿದ್ದ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಒಡಿಶಾ ಮೂಲದ ಆರೋಪಿಗಳು ಕಡಕೊಳದ ಗ್ರಾನೈಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಕುಡಿದ ಮತ್ತಿನಲ್ಲಿದ್ದ ಇವರು ರೈಲ್ವೆ ಹಳಿಗೆ ಕಬ್ಬಿಣ, ಮರದ ವಸ್ತುಗಳನ್ನು ತಂದಿಟ್ಟಿದ್ದರು. ವಿಚಾರಣೆಗೆ ಒಳಪಡಿಸಿದಾಗ ಕುಡಿದ ಮತ್ತಿನಲ್ಲಿ ಈ ಕೃತ್ಯ ಮಾಡಿದ್ದೇವೆಂದು ಒಪ್ಪಿಕೊಂಡಿದ್ದಾರೆ. ಹಾಗಾಗಿ ಕಾನೂನಿನ ಪ್ರಕಾರ ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ಶಿಲ್ಪಿ ಅಗರವಾಲ್ ತಿಳಿಸಿದರು.