ಕಲಾಸಿಪಾಳ್ಯದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಾರಿಗೆ ಸಚಿವರು

BMTC
Published on

ಬೆಂಗಳೂರು: ನಗರದ ಕಲಾಸಿಪಾಳ್ಯದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಸೋಮವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ತಾವು ಸಾರಿಗೆ ಸಚಿವರಾಗಿದ್ದಾಗ ಕಲಾಸಿಪಾಳ್ಯದ ಬಸ್ ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ೬೪ ಕೋಟಿ ರೂ.ಗಳ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ಕೆಲ ಸಮಸ್ಯೆಗಳಿರುವ ಬಗ್ಗೆ ಸಾರ್ವಜನಿಕರು ತಮ್ಮ ಬಳಿ ದೂರು ಹೇಳಿಕೊಂಡಿದ್ದರು. ಅದನ್ನು ಪರಿಶೀಲಿಸಲು ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದರು.
ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ, ಶೆಲ್ಟರ್ ಹಾಗೂ ಸಣ್ಣಪುಟ್ಟ ಸಮಸ್ಯೆಗಳಿವೆ. ಅದನ್ನು ತುರ್ತಾಗಿ ಬಗೆಹರಿಸಲು ಸೂಚನೆ ನೀಡಲಾಗಿದೆ. ಈ ಮೊದಲು ಖಾಸಗಿ ಬಸ್‌ಗಳಿಗೆ ನಿಲ್ದಾಣದ ಬಾಡಿಗೆಯನ್ನಾಗಿ ೮ ಸಾವಿರ ರೂ. ನಿಗದಿ ಮಾಡಲಾಗಿತ್ತು. ನಂತರ ಅದನ್ನು ಪರಿಷ್ಕರಣೆ ಮಾಡಿ ೩ ಸಾವಿರ ರೂ.ಗೆ ಇಳಿಸಲಾಗಿತ್ತು. ಇಂದು ಅದರಲ್ಲೂ ಕಡಿಮೆ ಮಾಡಿ ದಿನಕ್ಕೆ ಪ್ರತಿ ಬಸ್‌ಗೆ ೫೦ ರೂ.ನಂತೆ ಮಾಸಿಕ ಒಂದೂವರೆ ಸಾವಿರ ರೂ. ಬಾಡಿಗೆ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದೇನೆ. ಈ ಮೊತ್ತವನ್ನು ನಿಲ್ದಾಣದಲ್ಲಿನ ಮೂಲಸ್ವಚ್ಛತೆ ಹಾಗೂ ಇತರೆ ಮೂಲ ಸೌಲಭ್ಯಗಳಿಗೆ ಬಳಸಲಾಗುವುದು. ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ೪,೪೦೦, ಕೆಎಸ್‌ಆರ್‌ಟಿಸಿ ೪೦೦, ಖಾಸಗಿ ಬಸ್‌ಗಳು ೨೫೦ ಟ್ರಿಪ್‌ಗಳಲ್ಲಿ ಸಂಚರಿಸುತ್ತಿವೆ. ಇಲ್ಲಿ ಮತ್ತಷ್ಟು ಸೌಲಭ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮೊಕದ್ದಮೆ ಹಿಂಪಡೆಯಿರಿ:
ಖಾಸಗಿ ಬಸ್ ಮಾಲೀಕರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿದಿನಕ್ಕೆ ೨೦ ರೂ. ದರ ನಿಗದಿ ಮಾಡುವಂತೆ ಮನವಿ ಮಾಡಿದರು. ಈ ವೇಳೆ ಖಾಸಗಿ ಬಸ್ ಮಾಲೀಕರಿಗೆ ಸೂಚನೆ ನೀಡಿದ ಸಚಿವರು, ಬಿಎಂಟಿಸಿ ವಿರುದ್ಧ ನ್ಯಾಯಾಲಯದಲ್ಲಿ ಹೂಡಲಾಗಿರುವ ಮೊಕದ್ದಮೆಯನ್ನು ಹಿಂಪಡೆಯುವಂತೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net