ನೃಪತುಂಗಾ ರಸ್ತೆಯಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ; ರಾಮಲಿಂಗಾ ರೆಡ್ಡಿ ಉದ್ಘಾಟನೆ

smart
Published on

ಬೆಂಗಳೂರು: ಕೆ.ಆರ್ ವೃತ್ತದ ನೃಪತುಂಗಾ ರಸ್ತೆಯಲ್ಲಿ ಶಿಲ್ಪಾ ಫೌಂಡೇಶನ್ ಸೇಪಿಯನ್ಸ್ ಸಂಸ್ಥೆ ಸಹಯೋಗದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಸ್ಮಾರ್ಟ್ ಬಸ್ ನಿಲ್ದಾಣವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಉದ್ಘಾಟಿಸಿದರು.

ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ನಿರ್ಮಾಣಗೊಂಡಿರುವ 3 ಬಸ್ ನಿಲ್ದಾಣಗಳಲ್ಲಿ ಮೊದಲನೇಯ ಬಸ್ ನಿಲ್ದಾಣವನ್ನು ಉದ್ಘಾಟನೆ ನಂತರ ಬಿಬಿಎಂಪಿಗೆ ಹಸ್ತಾಂತರಿಸಲಾಯಿತು.

ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಸೇಪಿಯನ್ಸ್ ಹಾಗೂ ಶಿಲ್ಪಾ ಫೌಂಡೇಶನ್ ನೇತೃತ್ವದಲ್ಲಿ ನಿರ್ಮಾಣವಾಗಿರುವ ಸ್ಮಾರ್ಟ್ ನಿಲ್ದಾಣ ಹಲವು ವೈಶಿಷ್ಟತೆಗಳಿಂದ ಕೂಡಿದ್ದು, ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ. ಇದರ ಸೌಲಭ್ಯಗಳನ್ನು ಸಾರ್ವಜನಿಕರು ಸದ್ಭಳಕೆ ಮಾಡಿಕೊಳ್ಳಬೇಕು. ಮಹಿಳೆಯರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಯೋಜನೆ ಯಶಸ್ವಿಯಾದಲ್ಲಿ ನಗರದ ಇತರೆಡೆಯೂ ಸ್ಮಾರ್ಟ್ ಬಸ್ ನಿಲ್ದಾಣದ ನಿರ್ಮಾಣದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸೇಪಿಯನ್ಸ್ ಸಂಸ್ಥೆಯ ಸುರಜೀತ್ ಬಸು, ರಾಜೇಶ್ ಕೆಂಕೆರೆ, ಸುಶೀಲ್ ಮಹಲ, ಗಿರೀಶ್ ಕುಮಾರ್, ಶಿಲ್ಪಾ ಫೌಂಡೇಶನ್ ಸಂಸ್ಥಾಪಕ ಅಚ್ಚುತ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಸ್ಮಾರ್ಟ್ ನಿಲ್ದಾಣದ ವೈಶಿಷ್ಟ್ಯಗಳು

ನಗರದಲ್ಲಿ ಹಲವು ಬಸ್ ನಿಲ್ದಾಣಗಳಿದ್ದರೂ ಅತ್ಯಾಧುನಿಕ ಶೈಲಿಯ ಗುಣಮಟ್ಟದ ನಿಲ್ದಾಣವನ್ನು ಕಲ್ಪಿಸುವುದಕ್ಕೆ ಸ್ಮಾರ್ಟ್ ನಿಲ್ದಾಣ ಹೆಚ್ಚು ಒತ್ತು ನೀಡಿದೆ. 24/7 ಸಿಸಿ ಕ್ಯಾಮರಾಗಳು ಕಾರ್ಯಾಚರಿಸಲಿವೆ. ಸಿಸಿ ಕ್ಯಾಮರಾಗಳು ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕ ಹೊಂದಿರಲಿದೆ. ಪ್ರಮುಖವಾಗಿ ಪ್ಯಾನಿಕ್ ಬಟನ್ ಅಳವಡಿಸಲಾಗಿದ್ದು, ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಯಾವುದೇ ರೀತಿಯ ಅಪಾಯ ಉಂಟಾಗುವ ಸನ್ನಿವೇಶದಲ್ಲಿ ಪ್ಯಾನಿಕ್ ಬಟನ್ ಒತ್ತಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಸಂದೇಶ ತಲುಪಲಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಅಪಾಯಕ್ಕೊಳಗಾದವರ ರಕ್ಷಣೆ ಮಾಡಬಹುದು.

ಅಗತ್ಯ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ದೊರೆಯಲಿವೆ. ಮೊಬೈಲ್ ಹಾಗೂ ಲ್ಯಾಪ್ ಟಾಪ್ ಚಾರ್ಜಿಂಗ್ ಪಾಯಿಂಟ್, ಸೆನ್ಸಾರ್ ಬೇಸ್ಡ್ ಡಸ್ಟ್ ಬಿನ್ ಅಳವಡಿಸಲಾಗಿದ್ದು, ತ್ಯಾಜ್ಯ ತುಂಬಿದ ತಕ್ಷಣ ನಿರ್ವಾಹಕರಿಗೆ ಮಾಹಿತಿ ತಲುಪಲಿದೆ. ಸ್ನ್ಯಾಕ್ ವೆಂಡಿಂಗ್ ಮೆಷಿನ್ ಅಳವಡಿಸಲು ಸ್ಥಳ ಮೀಸಲಿರಿಸಲಾಗಿದೆ. ಹಾಗೂ ಬಸ್ಸು ನಿಲ್ದಾಣದಲ್ಲಿ ನಾಲ್ಕು ಡಿಸ್ಪ್ಲೇಗಳನ್ನು ಅಳವಡಿಸಿದ್ದು ಬಿ.ಎಂ.ಟಿ.ಸಿ ಬಸ್ಸುಗಳ ವಿವರ ಲಭ್ಯವಾಗಲಿದೆ. ಹಾಗೂ ಬಿಬಿಎಂಪಿ ಮತ್ತು ಸರ್ಕಾರದ ಸಾರ್ವಜನಿಕ ಹಿತಾಸಕ್ತಿಯ ಸಂದೇಶಗಳನ್ನು ಪ್ರದರ್ಶಿಸಲು ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net