

ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಮಗಳೂರು ಘಟಕದ ನೌಕರರು ಬುಧವಾರ ಬೆಳಗ್ಗೆ ನಗರದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಸಾರಿಗೆ ಸಚಿವರು ಎಂಟು ಬೇಡಿಕೆಗಳನ್ನು ಈಡೇರಿಸಿರುವುದಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇವರು ಸಚಿವರಾಗಿರಲು ಅರ್ಹರಲ್ಲ ಎಂದರು.
ನೌಕರರನ್ನು ಅಮಾನತುಗೊಳಿಸಲಿ:
ವೇತನ ಕಡಿತಗೊಳಿಸುವುದಾಗಿ ಹಾಗೂ ಅಮಾನತು ಮಾಡುವುದಾಗಿ ನೌಕರರಲ್ಲಿ ಭಯದ ವಾತಾವರಣ ಹುಟ್ಟಿಸುತ್ತಿದ್ದಾರೆ. ಅವರಿಗೆ ಧೈರ್ಯವಿದ್ದರೆ ಎಲ್ಲ ನೌಕರರನ್ನು ಅಮಾನತುಗೊಳಿಸಲಿ ಎಂದು ಸವಾಲು ಹಾಕಿದರು. ಖಾಸಗಿ ಬಸ್ ಮತ್ತಿತರ ವಾಹನ ಮಾಲೀಕರು ಮುಷ್ಕರಕ್ಕೆ ಪರ್ಯಾಯವಾಗಿ ಸಂಚಾರ ವ್ಯವಸ್ಥೆಗೆ ನೆರವಾಗಿದ್ದಾರೆ. ಅವರು ಸೇವೆ ಹಿಂತೆಗೆದುಕೊಂಡು ಮುಷ್ಕರ ಬೆಂಬಲಿಸಲಿ ಎಂದು ಆಗ್ರಹಿಸಿದರು. ಬಿಎಸ್‍ಪಿ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಅಗತ್ಯ ಸೌಲಭ್ಯ ಒದಗಿಸಬೇಕು. ಈ ನಿಟ್ಟಿನಲ್ಲಿ ನೌಕರರು ಹೋರಾಟದಿಂದ ಹಿಂಜರಿಯಬಾರದು. ಜತೆಗೆ ಪ್ರತಿಭಟನೆ ತೀವ್ರತೆ ಪಡೆಯಬೇಕು ಎಂದು ಸಲಹೆ ನೀಡಿದರು.
ಭಯವಿಲ್ಲದೆ ಹೋರಾಡಿ:
ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ನ್ಯಾಯಯುತ ಹೋರಾಟವನ್ನು ಯಾವುದೇ ಭಯವಿಲ್ಲದೆ ಮುಂದುವರಿಸಿ. ಎಂಥ ಕ್ಲಿಷ್ಟಕರ ಸಂದರ್ಭದಲ್ಲೂ ನಿಗಮದ ನೌಕರರ ಜತೆಗಿರುವುದಾಗಿ ಹೇಳಿದರು. ನಿಗಮದ ನೌಕರರ ಕೂಟದ ಗೌರವಾಧ್ಯಕ್ಷೆ ರಾಧಾ ಸುಂದರೇಶ್, ರೈತ ಮುಖಂಡ ಗುರುಶಾಂತಪ್ಪ, ದಲಿತ ಮುಖಂಡ ಮರ್ಲೆ ಅಣ್ಣಯ್ಯ, ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್, ಕೃಷ್ಣಮೂರ್ತಿ, ಅನಿಲ್ ಆನಂದ್, ಪ್ರಸನ್ನ, ಸದಾಶಿವ, ಶ್ರೀನಿವಾಸ್, ರವಿಕುಮಾರ್, ಪುಟ್ಟಸ್ವಾಮಿ, ಉಮೇಶ್, ಶ್ರೀಕಾಂತ್, ಛಾಯಾಕುಮಾರಿ, ಶಾರದಾ, ವಸಂತಮ್ಮ, ಶಶಿಕಲಾ, ಶಾಂತಕ್ಕ ಗುಡಿಸಲಮನಿ ಇತರರಿದ್ದರು.