

ಎಂ.ಎಸ್. ಹಿರೇಮಠ ಸಂಶಿ
ಕರೊನಾ ಎರಡನೇ ಅಲೆಯ ಲಾಕ್ಡೌನ್ ಸಡಲಿಕೆ ಬಳಿಕವೂ ಸಾರಿಗೆ ಭಾಗ್ಯ ದೊರೆಯದ ಪರಿಣಾಮ ತುತ್ತಿನ ಚೀಲ ತುಂಬಿಸಿಕೊಳ್ಳಲು ನಿತ್ಯ ಹುಬ್ಬಳ್ಳಿಗೆ ತೆರಳುವ ಸಂಶಿ ಸೇರಿ ಹತ್ತಾರು ಹಳ್ಳಿಗಳ ಜನರು ಅಕ್ಷರಶಃ ಪರದಾಡುವಂತಾಗಿದೆ.
ಹುಬ್ಬಳ್ಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಕುಂದಗೋಳ ತಾಲೂಕಿನ ಶಿರೂರಿನ ಬಳಿ 3 ತಿಂಗಳ ಹಿಂದೆ ಮಳೆಯಿಂದಾಗಿ ಮೇಲ್ಸೇತುವೆ ಕುಸಿದ ಹಿನ್ನೆಲೆ ಸಾರಿಗೆ ಬಸ್ ಸಂಚಾರ ಬಂದ್ ಆಗಿತ್ತು. ನಂತರ ಲಾಕ್ಡೌನ್ನಿಂದ ಪ್ರಯಾಣಿಕರ ರೈಲು ಸಂಚಾರವು ಸ್ಥಗಿತಗೊಂಡ ಪರಿಣಾಮ ಈ ಭಾಗದ ಜನರು ಉದ್ಯೋಗಕ್ಕಾಗಿ ಹುಬ್ಬಳ್ಳಿಗೆ ತೆರಳಲು ತೀವ್ರ ಸಮಸ್ಯೆಯಾಗಿದೆ.
ಸಂಶಿ ಸೇರಿ ಚಾಕಲಬ್ಬಿ, ಪಶುಪತಿಹಾಳ, ಹೊಸಳ್ಳಿ, ಯರೇಬೂದಿಹಾಳ, ಹಿರೇಗುಂಜಳ, ಚಿಕ್ಕಗುಂಜಳ, ಬಾಗವಾಡ, ಕೊಡ್ಲಿವಾಡ, ಬರದ್ವಾಡ ಗ್ರಾಮಗಳ ಜನರು ಸಾರಿಗೆ ಸಂಕಷ್ಟ ಅನುಭವಿಸುವಂತಾಗಿದೆ.
ಶಾಲಾ, ಕಾಲೇಜು ಆರಂಭವಾದರೆ ಸಮಸ್ಯೆ ಉಲ್ಬಣ: ಅನ್ಲಾಕ್ ಬಳಿಕ ವಿವಿಧ ಕ್ಷೇತ್ರಗಳು ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಎಲ್ಲೆಡೆ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ. ಆದರೆ, ಸಂಶಿ ಸುತ್ತಮುತ್ತಲ ಹಳ್ಳಿಗಳ ಜನರಿಗೆ ಆ ಭಾಗ್ಯ ಇಲ್ಲವಾಗಿದೆ. ಇನ್ನು ಶಾಲಾ-ಕಾಲೇಜು ಆರಂಭವಾದರೆ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಲಿದೆ.
ಮೇಲ್ಸೇತುವೆ ದುರಸ್ತಿ ಯಾವಾಗ?: ಶಿರೂರ ಬಳಿ ಮೇಲ್ಸೇತುವೆ ಕುಸಿದು ಬರೋಬ್ಬರಿ ಮೂರು ತಿಂಗಳು ಕಳೆದಿವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಪೊಳ್ಳು ಭರವಸೆಗಳಲ್ಲೇ ದಿನ ಕಳೆಯುತ್ತಿದ್ದು, ಸೇತುವೆ ದುರಸ್ತಿ ಯಾವಾಗ ಎಂಬುದು ಈ ಭಾಗದ ಜನರ ಪ್ರಶ್ನೆಯಾಗಿದೆ.
ಸ್ಥಗಿತಗೊಂಡ ಸರ್ವೀಸ್ ರಸ್ತೆ
ಮೇಲ್ಸೇತುವೆ ಕುಸಿದ ಬಳಿಕ ತಾತ್ಕಾಲಿಕವಾಗಿ ಸೇತುವೆ ಕೆಳಗೆ ಬಸಾಪೂರ ಸೇತುವೆವರೆಗೆ ಒದಗಿಸಿದ್ದ ಪರ್ಯಾಯ ಮಾರ್ಗ ಬಾರಿ ವಾಹನಗಳ ಸಂಚಾರದಿಂದ ಹದಗೆಟ್ಟಿದೆ. ಈ ಮಾರ್ಗ ರೈಲ್ವೆ ಇಲಾಖೆಗೆ ಸೇರಿದ್ದಾಗಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ ರೈಲ್ವೆ ಇಲಾಖೆ ಆದೇಶಿಸಿದೆ.
ಮೂರುತಿಂಗಳ ಹಿಂದೆ ಮಳೆಯಿಂದ ಶಿರೂರ ಬಳಿ ಕುಸಿದ ಮೇಲ್ಸೇತುವೆ ದುರಸ್ತಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ವಾರದೊಳಗೆ ದುರಸ್ತಿ ಕಾಮಗಾರಿ ಆರಂಭವಾಗಲಿದೆ.| ಆರ್.ಪಿ. ಕಿತ್ತೂರ ಎಇಇ ಪಿಡಬ್ಲ್ಯುಡಿ ಕುಂದಗೋಳ