ಸಾರಿಗೆ ಸಂಪರ್ಕ ಸಭೆ: ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ-ಡಿಸಿ

MDK10
Published on

ಮಡಿಕೇರಿ: ಪ್ರತೀ ತಿಂಗಳು ನಡೆಯುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸಂದರ್ಭದಲ್ಲಿ ಸಾರ್ವಜನಿಕರಿಂದ ಬಸ್ ಸಂಪರ್ಕ ಕಲ್ಪಿಸುವಂತೆ ಸಾಕಷ್ಟು ಮನವಿಗಳು ಸಲ್ಲಿಕೆಯಾಗುತ್ತಿದ್ದು, ಈ ಹಿನ್ನೆಲೆ ಮೋಟಾರು ವಾಹನ ಕಾಯ್ದೆ ೭೨ ಅನ್ವಯ ೨೪ ಕಿ.ಮೀ.ವರೆಗೆ ಕೆಎಸ್‌ಆರ್‌ಟಿಸಿ ಅಥವಾ ಖಾಸಗಿ ಸಂಸ್ಥೆಯವರು ಬಸ್ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸಲಹೆ ಮಾಡಿದರು.


ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ನೂತನವಾಗಿ ಆರಂಭವಾಗಿರುವ ನ್ಯಾಯಾಲಯ ಸಂಕೀರ್ಣ, ಕಂಬಿಬಾಣೆ, ಗೋಣಿಮರೂರು ಸೇರಿದಂತೆ ಹಲವು ಪ್ರದೇಶಗಳಿಗೆ ಬಸ್ ಸಂಪರ್ಕ ಕಲ್ಪಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಾರಿಗೆ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.


ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಮಾತನಾಡಿ, ಕೆಎಸ್‌ಆರ್‌ಟಿಸಿ ವತಿಯಿಂದ ೫೫ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿವೆ ಎಂದರು.


ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಸ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಸಮಯ ಪಾಲನೆ ಮಾಡುವಂತಾಗಬೇಕು. ಕೆಲವು ಕಡೆಗಳಲ್ಲಿ ಪ್ರತೀ ನಿತ್ಯ ಆಟೋಗಳ ಮೂಲಕ ಪ್ರಯಾಣಿಕರನ್ನು ಕರೆದುಕೊಂಡು ಹೋಗಲಾಗುತ್ತಿದೆ. ಇದರಿಂದ ಖಾಸಗಿ ಬಸ್ ಸಂಸ್ಥೆಯವರಿಗೆ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.


ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಈ ಬಗ್ಗೆ ರ‌್ಯಾಂಡಮ್ ಆಗಿ ಪರಿಶೀಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನಿರ್ದೇಶನ ನೀಡಿದ ಅವರು, ಮಡಿಕೇರಿ-ಭಾಗಮಂಡಲ, ಮಡಿಕೇರಿ-ಸೋಮವಾರಪೇಟೆ, ಮಡಿಕೇರಿ-ಶನಿವಾರಸಂತೆ, ಕುಶಾಲನಗರ-ಸುಂಟಿಕೊಪ್ಪ-ಕಂಬಿಬಾಣೆ, ಕುಶಾಲನಗರ-ಚಿಕ್ಕಅಳುವಾರ-ಸೋಮವಾರಪೇಟೆ, ಸೋಮವಾರಪೇಟೆ-ಚಿಕ್ಕಅಳುವಾರ-ಕುಶಾಲನಗರ ಹೀಗೆ ಹಲವು ಕಡೆಗಳಲ್ಲಿ ನಿಯಮಿತವಾಗಿ ಬಸ್‌ಗಳು ಸಂಚರಿಸಬೇಕು ಎಂದು ಹೇಳಿದರು.


ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ಮಾತನಾಡಿ, ಸಾಧ್ಯವಾದಷ್ಟು ಎಲ್ಲಾ ಕಡೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.


ಜಿಲ್ಲೆಯ ಕುಟ್ಟ ಗ್ರಾಮ ಗಡಿಭಾಗದಿಂದ ಕೇರಳಕ್ಕೆ ತೆರಳುವ ಸಂದರ್ಭದಲ್ಲಿ ಇಲ್ಲಿನ ವಾಹನಗಳನ್ನು ಪರಿಶೀಲಿಸುತ್ತಾರೆ. ಆದರೆ ನೆರೆ ರಾಜ್ಯದಿಂದ ಬರುವ ವಾಹನಗಳನ್ನು ನಮ್ಮ ಜಿಲ್ಲೆಯ ಗಡಿಭಾಗದಲ್ಲಿ ಯಾರೂ ಸಹ ತಪಾಸಣೆ ಮಾಡುವುದಿಲ್ಲ ಎಂದು ಸಾರ್ವಜನಿಕರು ಅತೃಪ್ತಿ ವ್ಯಕ್ತಪಡಿಸಿದರು. ಈ ಬಗ್ಗೆ ರ‌್ಯಾಂಡಮ್ ಆಗಿ ಪರಿಶೀಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದರು.


ಟ್ಯಾಕ್ಸಿ ಯೂನಿಯನ್‌ನ ಪ್ರತಿನಿಧಿಯೊಬ್ಬರು ಮಾತನಾಡಿ, ಬಾಡಿಗೆ ಆಧಾರಿತ ಮೋಟಾರು ಬೈಕ್ ಸಂಚಾರದಿಂದಾಗಿ ಟ್ಯಾಕ್ಸಿ ಮಾಲೀಕರ ಕುಟುಂಬದವರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿಯಲ್ಲಿ ಕೋರಿದರು.


ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮೋಟಾರು ವಾಹನ ಕಾಯ್ದೆಯಂತೆ ರಾಜ್ಯ ಸಾರಿಗೆ ಪ್ರಾಧಿಕಾರದಿಂದ ಅನುಮತಿಯ ನಂತರ, ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪರವಾನಗಿ ಪಡೆದು ಸಂಚರಿಸುತ್ತಿವೆ. ಆದರೂ, ರ‌್ಯಾಂಡಮ್ ಆಗಿ ಪರಿಶೀಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಎನ್.ಮಧುರ ಮಾತನಾಡಿ, ಜಿಲ್ಲೆಯಲ್ಲಿ ಬಾಡಿಗೆ ಆಧಾರಿತ ಮೋಟಾರ್ ಬೈಕ್‌ಗಳ ಸಂಬಂಧ ೧೪೩ ಬೈಕ್‌ಗಳು ಪರವಾನಗಿ ಪಡೆದಿವೆ ಎಂದರು.


ಸಭೆಯಲ್ಲಿ ಸಾರ್ವಜನಿಕರು, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಚಾಲಕ ಮತ್ತು ಮಾಲೀಕ ಸಂಘಸಂಸ್ಥೆಗಳ ಪದಾಧಿಕಾರಿಗಳಿದ್ದರು.

ರಸ್ತೆ ಸುರಕ್ಷತಾ ಸಮಿತಿ ಸಭೆ: ಬಳಿಕ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆ ಅಗತ್ಯವಿರುವ ಕಡೆ ಜಿಬ್ರಾ ಕ್ರಾಸ್, ಮಾಹಿತಿ ಫಲಕ ಅಳವಡಿಸುವ ಸಂಬಂಧ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದು ಪ್ರಸ್ತಾವನೆ ಸಲ್ಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದರು. ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ಪೊಲೀಸ್ ಇನ್ಸ್‌ಪೆಕ್ಟರ್ ಮೇದಪ್ಪ, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ಜಿ.ಪಂ.ಯೋಜನಾ ನಿರ್ದೇಶಕ ಜಗದೀಶ, ಪೌರಾಯುಕ್ತ ವಿಜಯ, ಎಂಜಿನಿಯರ್ ಸೌಮ್ಯ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಎಂಜಿನಿಯರ್ ಮುರುಗೇಶ್, ಇತರರು ಹಲವು ಮಾಹಿತಿ ನೀಡಿದರು. ಆಟೋ ಮಾಲಿಕರ ಸಂಘದ ಅಧ್ಯಕ್ಷರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net