

ಸಾಸ್ವೆಹಳ್ಳಿ: ಸಾರಿಗೆ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿ ಹೋಬಳಿಯ ಲಿಂಗಾಪುರ ಗ್ರಾಮದ ವಿದ್ಯಾರ್ಥಿಗಳು ಸೋಮವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಲಿಂಗಾಪುರ ಸೇರಿ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಹೊನ್ನಾಳಿ, ಶಿವಮೊಗ್ಗ ಮತ್ತಿತರ ನಗರಗಳಿಗೆ ಶಾಲಾ- ಕಾಲೇಜುಗಳಿಗೆ ಹೋಗಿ ಬರುತ್ತಾರೆ. ರಾಜ್ಯ ಸರ್ಕಾರದ ಉಚಿತ ಪ್ರಯಾಣ ಸೌಲಭ್ಯದಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಸಂಚಾರ ಮಾಡುವುದೇ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.
ವಿದ್ಯಾರ್ಥಿನಿಯೊಬ್ಬಳು ಬಸ್ ಹತ್ತುವಾಗ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಳು. ಇಂತಹ ಘಟನೆಗಳು ಮುಂದೆ ಸಂಭವಿಸಬಾರದು. ಈ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹೊನ್ನಾಳಿ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್ವರಪ್ಪ ಅವರು, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಎರಡು ಹೆಚ್ಚುವರಿ ಬಸ್ ಓಡಿಸಲಾಗುವುದು. ಸದ್ಯ ಒಂದು ಮತ್ತು ಇಲಾಖೆ ಅನುಮತಿ ಪಡೆದ ಬಳಿಕ ಮತ್ತೊಂದು ಬಸ್ ಅನ್ನು 15 ದಿನದೊಳಗೆ ಬಿಡಲಾಗುವುದು ಎಂದು ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ವಿದ್ಯಾರ್ಥಿಗಳ ಸಮಸ್ಯೆ ಗಮನಕ್ಕೆ ಬಂದೊಡನೆ ಸ್ಥಳಕ್ಕೆ ಧಾವಿಸಿ ಪರಿಹಾರ ನೀಡಲಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣಕ್ಕೆ ಪಾಸ್ ಹೊಂದಿದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಬಸ್ ವ್ಯವಸ್ಥೆ ಮಾಡಲಾಗುವುದು.
ಮಹೇಶ್ವರಪ್ಪ, ವ್ಯವಸ್ಥಾಪಕ, ಕೆಎಸ್‌ಆರ್‌ಟಿಸಿ ಡಿಪೋ, ಹೊನ್ನಾಳಿ.