

ಧಾರವಾಡ: ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ರಜತ ಮಹೋತ್ಸವ ಸಂಭ್ರಮ ಕಾರ್ಯಕ್ರಮ ಹಾಗೂ ಸಂಸ್ಥೆಯ 25ನೇ ಸಂಸ್ಥಾಪನಾ ದಿನಾಚರಣೆಯನ್ನು ಸೆ. 24ರಂದು ಸಂಜೆ 4 ಗಂಟೆಗೆ ಸತ್ತೂರಿನ ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಕಾರ್ಯಕ್ರಮದಲ್ಲಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮತ್ತು ವಿವಿಧ ಯೋಜನೆಗಳ ಉದ್ಘಾಟನೆ, ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತ ತಂಡಳಿಗೆ ಬಹುಮಾನ ವಿತರಿಸಲಾಗುವುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿಯ ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ 50 ಹೊಸ ಬಸ್‌ಗಳಿಗೆ ಹಾಗೂ ಪುನಃಶ್ಚೇತನಗೊಳಿಸಿದ ಬಸ್‌ಗಳಿಗೆ ಚಾಲನೆ ನೀಡುವರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಇ- ಉಗ್ರಾಣ ತಂತ್ರಾಂಶಕ್ಕೆ ಚಾಲನೆ ಮತ್ತು ಬೆಳ್ಳಿ ಹಬ್ಬದ ಅಂಗವಾಗಿ ಸ್ಮರಣಿಕೆ ಬಿಡುಗಡೆ ಮಾಡುವರು. ಸಂಸ್ಥೆಯ ಅಧ್ಯಕ್ಷ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ರಜತ ಮಹೋತ್ಸವ ಸಮಾರಂಭ ಉದ್ಘಾಟಿಸುವರು. ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ವಾಹನ ಚಾಲನಾ ಪಥದ ಉದ್ಘಾಟನೆ ಹಾಗೂ ಹುಬ್ಬಳ್ಳಿ- ಧಾರವಾಡ ನಗರ ಸಾರಿಗೆಗಳಲ್ಲಿ ನಗದು ರಹಿತ ಇ- ಪರ್ಸ್ ಸ್ಮಾರ್ಟ್ ಕಾರ್ಡ್‌ಗೆ ಚಾಲನೆ ನೀಡುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದು ಭರತ್ ಎಸ್. ತಿಳಿಸಿದ್ದಾರೆ.