

ಮಂಡ್ಯ: ಮೂರು ದಶಕದ ಬಳಿಕ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜನರು ಆಗಮಿಸಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಮಾಡಲಾಗುವುದು ಎಂದು ಸಾರಿಗೆ ಸಮಿತಿ ಅಧ್ಯಕ್ಷರೂ ಆದ ಮದ್ದೂರು ಶಾಸಕ ಕೆ.ಎಂ.ಉದಯ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರಿಗೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳನಕ್ಕೆ ನೋಂದಣಿ, ವಸತಿ ಹಾಗೂ ಇನ್ನಿತರ ಸಮಿತಿಗಳ ಬೇಡಿಕೆ ಪರಿಶೀಲಿಸಿ ಸುಗಮ ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಮುಖ್ಯವಾಗಿ ಸಮ್ಮೇಳನಕ್ಕೆ ಆಗಮಿಸುವವರಿಗೆ ಯಾರಿಗೆ,ಯಾವ ರೀತಿಯ ವಾಹನ ನೀಡಬೇಕು. ಸಮ್ಮೇಳನಕ್ಕೆ ಜನರನ್ನು ಕರೆತರಲು ಜಿಲ್ಲೆಯ ಹಳ್ಳಿಗೆ ಬಸ್ ನಿಯೋಜಿಸಬೇಕು. ಅಂತೆಯೇ ಸಮ್ಮೇಳನ ಸ್ಥಳ ತಲುಪಲು ಅನುಕೂಲವಾಗುವಂತೆ ಶಾಲಾ-ಕಾಲೇಜುಗಳ ಮಿನಿ ಬಸ್‌ಗಳನ್ನು ಪಡೆಯುವುದು ಸೇರಿದಂತೆ ವಿವಿಧ ರೀತಿಯ ವಾಹನಗಳನ್ನು ಸಾರಿಗೆ ವ್ಯವಸ್ಥೆಗೆ ಬಳಸಿಕೊಳ್ಳಲಾಗುವುದು ಎಂದರು.
ಮಂಡ್ಯದಲ್ಲಿ 30 ವರ್ಷದ ಬಳಿಕ ನುಡಿಜಾತ್ರೆ ನಡೆಯುತ್ತಿದ್ದು, ಇದನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸುವುದು ನಮ್ಮೆಲ್ಲರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಅದಕ್ಕಾಗಿ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿರ್ಧರಿಸಬೇಕು. ಮುಂದಿನ ಕೆಲ ದಿನಗಳಲ್ಲಿ ಸಚಿವರ ಸಲಹೆ ಪಡೆದು ನಮ್ಮ ಸಮಿತಿ ಒಂದು ಉತ್ತಮ ತಂಡವಾಗಿ ಕೆಲಸ ಮಾಡಬೇಕು. ಅದಕ್ಕಾಗಿ ಸಮಿತಿಯ ಸದಸ್ಯರೆಲ್ಲರಿಗೂ ನಿರ್ದಿಷ್ಟ ಜವಾಬ್ದಾರಿ ವಹಿಸಲಾಗುವುದು. ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಸಾಹಿತಿಗಳು, ಕನ್ನಡಾಭಿಮಾನಿಗಳಿಗೆ ವೇದಿಕೆ ಕಾರ್ಯಕ್ರಮದ ಬಳಿ ಕರೆದುಕೊಂಡು ಹೋಗಲು ಸೂಕ್ತ ವಾಹನಗಳ ವ್ಯವಸ್ಥೆ ಮಾಡಬೇಕು. ವೇದಿಕೆ ಕಾರ್ಯಕ್ರಮದ ಸ್ವಲ್ಪ ದೂರದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದರು.
ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಸುಧಾಮ, ಸಾರಿಗೆ ಸಮಿತಿಯ ಧ್ಯೇಯೋದ್ದೇಶಗಳು ಮತ್ತು ಜವಾಬ್ದಾರಿಗಳನ್ನು ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 233 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಗ್ರಾಪಂನಿಂದ 200 ಜನರು ಸಮ್ಮೇಳನಕ್ಕೆ ಬರುವಂತೆ ತಿಳಿಸುವುದರ ಜತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಮ್ಮೇಳನಕ್ಕೆ ಕರೆತರಲು ವ್ಯವಸ್ಥೆ ಮಾಡಬಹುದು ಎಂದರು. ಸಮಿತಿ ಸಂಚಾಲಕಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಹಾವೇರಿ ಸಮ್ಮೇಳನದಲ್ಲಿ ಬಳಸಿಕೊಂಡ ವಾಹನಗಳ ಸಂಖ್ಯೆ ಮತ್ತು ಜಿಲ್ಲೆಯಲ್ಲಿ ಸಮ್ಮೇಳನಕ್ಕೆ ಬಳಕೆಯಾಗುವ ವಿವಿಧ ರೀತಿಯ ವಾಹನಗಳ ಸಂಖ್ಯೆಯನ್ನು ತಿಳಿಸಿದರು.
ಸಾಹಿತ್ಯ ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸಾರಿಗೆ ಸಮಿತಿಗೆ ವಿಶಿಷ್ಟ ರೀತಿಯ ಜವಾಬ್ದಾರಿ ಇದೆ. ಆದ್ದರಿಂದ ಅಗತ್ಯಕ್ಕೆ ತಕ್ಕಂತೆ ಶಾಲಾ ವಾಹನಗಳನ್ನು ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ವಿವಿಧ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಾಲಾ ಮುಖ್ಯಸ್ಥರ ಸಭೆ ಕರೆದು ವಾಹನಗಳನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ಪಡೆಯೋಣ. ಸಮ್ಮೇಳನ ನಡೆಯುವ ಸ್ವಲ್ಪ ದೂರದಲ್ಲಿರುವ ಸ್ಥಳಗಳನ್ನು ಗುರುತಿಸಿ ಬಳಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬಹುದು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಶಿಕ್ಷಣ ಸಂಸ್ಥೆಗಳಿಂದ ಉಚಿತ ಬಸ್ ಪಡೆಯಲು ಮನವಿ ಮಾಡಬಹುದು. ಸಮ್ಮೇಳನದ ಹಿಂದಿನ ದಿನ ರಾಜ್ಯದ ವಿವಿಧೆಡೆಗಳಿಂದ ಪ್ರತಿನಿಧಿಗಳು ಆಗಮಿಸುವುದರಿಂದ ಒಂದು ದಿನ ಮುಂಚೆಯೇ ವಾಹನ ಸೌಲಭ್ಯ ಒದಗಿಸಬೇಕು. ಸಮ್ಮೇಳನಕ್ಕೆ ಬಸ್ ಒದಗಿಸುವುದರ ಜತೆಗೆ ಆಸಕ್ತರು ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಮಂಡ್ಯ ದರ್ಶನ ಮಾಡಲು ಅನುಕೂಲವಾಗುವಂತೆ ಒಂದಷ್ಟು ವಾಹನಗಳನ್ನು ನಿಗದಿಗೊಳಿಸಬೇಕು ಎಂದು ಸಲಹೆ ನೀಡಿದರು. ಮತ್ತೋರ್ವ ಕಾರ್ಯದರ್ಶಿ ಹರ್ಷ ವಿ.ಪಣ್ಣೆದೊಡ್ಡಿ ಮಾತನಾಡಿ, ಮಹಿಳೆಯರ ಉಚಿತ ಬಸ್ ಸೌಲಭ್ಯವಿರುವಂತೆ ಸಮ್ಮೇಳನ ನಡೆಯುವ ಮೂರು ದಿನ ಪುರುಷರಿಗೂ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕು ಎಂದರು. ಸಮಿತಿ ಸದಸ್ಯ, ವಕೀಲ ಟಿ.ಎಸ್.ಸತ್ಯಾನಂದ, ಸಮ್ಮೇಳನಕ್ಕೆ ಬಳಸಿಕೊಳ್ಳುವ ವಾಹನಗಳ ಚಲನ ವಲನ ತಿಳಿಯಲು ಕ್ಯೂ ಆರ್ ಕೋಡ್ ಮತ್ತು ಜಿಪಿಎಸ್ ಬಳಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಯೂ ಆದ ಸಮಿತಿಯ ಉಪಾಧ್ಯಕ್ಷ ಎಸ್.ಪಿ.ನಾಗರಾಜು, ಬಿಇಒ ಮಹದೇವು, ಖಾಸಗಿ ವಾಹನಗಳ ಮಾಲೀಕರ ಸಂಘದ ಅಧ್ಯಕ್ಷ ಭಕ್ತವತ್ಸಲ, ಸಮ್ಮೇಳನದ ವಿಶೇಷಾಧಿಕಾರಿ ಚಂದ್ರಶೇಖರ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಸುನೀಲ್ಕುಮಾರ್, ಹೊಳಲು ಶ್ರೀಧರ್, ಕೃಷ್ಣ, ಚೇತನಕುಮಾರ್, ಜಿ.ವಿ.ನಾಗರಾಜು, ಕೋಣನಹಳ್ಳಿ ಜಯರಾಮು, ನೀಲಮೂರ್ತಿ ಇತರರಿದ್ದರು.