ಎಲ್ಲರ ಒಳಿತು ಕಾಪಾಡುವುದು ಸಾರಿಗೆ ಪ್ರಾಧಿಕಾರದ ಆಶಯ: ವೆಂಕಟ್ ರಾಜಾ

dc sabhe
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಸ್ಸು ಸಂಚಾರ ಸಂಬಂಧಿಸಿದಂತೆ ಎಲ್ಲರ ಹಿತಾಸಕ್ತಿ ಕಾಪಾಡುವುದು ಸಾರಿಗೆ ಪ್ರಾಧಿಕಾರದ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ಬಸ್ಸು ಸೇವೆ ಒದಗಿಸಲು ಎಲ್ಲರೂ ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಯಾರಿಗೂ ತೊಂದರೆ ಆಗದಂತೆ ಗಮನ ಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಖಾಸಗಿ ಬಸ್ಸು ಮಾಲೀಕ ಪುಟ್ಟಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಎಲ್ಲೆಲ್ಲಿ ಸಂಚಾರ ಮಾಡುತ್ತಿದೆ ಎಂಬ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು. ಅಲ್ಲದೇ, ಶಕ್ತಿ ಯೋಜನೆಯಿಂದಾಗಿ ಖಾಸಗಿ ಬಸ್ಸು ಮಾಲೀಕರಿಗೆ ತುಂಬಾ ತೊಂದರೆಯಾಗಿದೆ. ತೆರಿಗೆ ಪಾವತಿಸಲು ಸಹ ಕಷ್ಟವಾಗಿದೆ ಎಂದು ಸಭೆಯಲ್ಲಿ ಅಳಲು ತೋಡಿಕೊಂಡರು.

ಖಾಸಗಿ ಬಸ್ಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಮಾತನಾಡಿ, ಖಾಸಗಿ ಹಾಗೂ ಸರ್ಕಾರಿ ಬಸ್ಸ್‌ಗಳ ಸಂಚಾರ ಸಾರ್ವಜನಿಕರ ಬೇಡಿಕೆ ಮತ್ತಿರರ ಸಂಬಂಧ ಸರ್ವೆ ವರದಿ ಒದಗಿಸಬೇಕು. ಅಲ್ಲದೇ, ಸರ್ಕಾರಿ ಮತ್ತು ಖಾಸಗಿ ಬಸ್ಸ್‌ಗಳ ಸಂಚಾರ ನಡುವಿನ ಸಮಯ ಪಾಲನೆ ಅತಿಮುಖ್ಯ. ಜೊತೆಗೆ ಆರೋಗ್ಯಕರ ಪೈಪೋಟಿ ಇರಬೇಕು. ಆದರೆ ಈ ಕೆಲಸ ಆಗುತ್ತಿಲ್ಲ ಎಂದರು.

ಖಾಸಗಿ ಬಸ್ ಮಾಲೀಕರು ತಮ್ಮ ಅಹವಾಲು ಮಂಡಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ೧೫೧ ಖಾಸಗಿ ಬಸ್ ಸಂಚಾರ ಇದ್ದಾಗಿಯೂ ಪುನಃ ಕೆಎಸ್‌ಆರ್‌ಟಿಸಿ ಅವರು ಕೋರಿರುವ ೬೪ ಮಾರ್ಗಗಳನ್ನು ಮಂಜೂರು ಮಾಡಿದಲ್ಲಿ ಸಂಪೂರ್ಣ ನಷ್ಟವಾಗುವುದರೊಂದಿಗೆ ಅನಾರೋಗ್ಯಕರ ಪೈಪೋಟಿ ಏರ್ಪಡಲಿದೆ. ಸರ್ಕಾರ ಈಗಾಗಲೇ ಸಂಚರಿಸುತ್ತಿರುವ ಎಲ್ಲಾ ಖಾಸಗಿ ಬಸ್‌ಗಳನ್ನು ಸೇವ್ಡ್ ಆಪರೇಟರ್ಸ್‌ ಎಂದು ತಿಳಿಸಿರುವುದರಿಂದ ಸರ್ಕಾರದ ತೀರ್ಮಾನದಂತೆ ಖಾಸಗಿ ಬಸ್ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ಖಾಸಗಿ ಬಸ್ ಮಾಲೀಕರ ಪರವಾಗಿ ವಕೀಲರು ಕೋರಿದರು.

ಈ ಸಂಬಂಧ ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು ಸಭೆಯಲ್ಲಿ ವಿನಂತಿಸಿ, ಕುಶಾಲನಗರದಲ್ಲಿ ಹೊಸದಾಗಿ ಡಿಪೋ ಆರಂಭ ಆಗುವುದರಿಂದ ಶೀಘ್ರವಾಗಿ ರಹದಾರಿ ಮಂಜೂರು ಮಾಡಿದಲ್ಲಿ ಸರ್ವಿಸ್ ಪ್ರಾರಂಬಿಸಿ, ಸಾರ್ವಜನಿಕರಿಗೆ ಸೇವೆ ನೀಡಲಾಗುವುದೆಂದು ವಿವರಿಸಿದರು.

ಈ ಎಲ್ಲಾ ವಿವರ ಪರಿಶೀಲಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ಸರ್ಕಾರವು ನೀಡಿರುವ ಆದೇಶಗಳು, ಘನ ನ್ಯಾಯಾಲಯದ ಆದೇಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಾರಿಗೆ ಇಲಾಖೆ ವತಿಯಿಂದ ನೀಡಲಾದ ವರದಿ ಪರಿಶೀಲಿಸಲಾಗಿದೆ. ಖಾಸಗಿ ಬಸ್ ಮಾಲೀಕರುಗಳ ಅಹವಾಲುಗನ್ನು ಸಭೆಯು ಪರಿಗಣನೆಗೆ ತೆಗೆದುಕೊಂಡಿದೆ. ಈಗಾಗಲೇ ಶಕ್ತಿ ಯೋಜನೆ ಜಾರಿಯಲ್ಲಿದ್ದು, ಕೆಎಸ್‌ಆರ್‌ಟಿಸಿ ಮಜಲು ವಾಹನಗಳ ಅಗತ್ಯತೆಯೂ ಇದೆ. ಆದ್ದರಿಂದ ನಿಯಮಗಳಿಗೆ ಅನುಸಾರವಾಗಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವಿ.ನಾಗರಾಜಾಚಾರ್, ಕೆಎಸ್‌ಆರ್‌ಟಿಸಿ. ಘಟಕ ವ್ಯವಸ್ಥಾಪಕ ಮೆಹಬೂಬ್ ಆಲಿ, ಜನಾರ್ಧನ ಪ್ರಭು, ವಕೀಲರಾದ ನಾಗೇಶ್ ಸಾರಿಗೆ ಇಲಾಖೆಯ ಡಿ.ಕೆ.ರೀಟಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net