ಸರ್ಕಾರದ ನಿರ್ಲಕ್ಷ್ಯದಿಂದ ಸಾರಿಗೆ ಸಂಸ್ಥೆ ಸಾಲದಲ್ಲಿ

jagadish-shettar
Published on

ಹುಬ್ಬಳ್ಳಿ : ಗ್ಯಾರಂಟಿ ಯೋಜನೆಗಳನ್ನು ಉಚಿತವಾಗಿ ನೀಡುವುದಾಗಿ ಹೇಳುವ ಸರ್ಕಾರ ಮತ್ತೊಂದು ಕಡೆ ಸಾಲ ಮಾಡುತ್ತಿದೆ. ನಷ್ಟದಲ್ಲಿರುವ ಸಾರಿಗೆ ಸಂಸ್ಥೆ ಸಾಲ ಹಾಗೂ ಬಡ್ಡಿಯಲ್ಲಿ ನಡೆಯುತ್ತಿದ್ದು, ಸರ್ಕಾರದ ನಿರ್ಲಕ್ಷ್ಯೇ ಇದಕ್ಕೆ ಕಾರಣ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಸ್ ಟಿಕೆಟ್ ದರ ಹೆಚ್ಚಿಸಿ ಪ್ರಯಾಣಿಕರಿಗೆ ಹೊರೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತದಲ್ಲಿ ಬಿಗಿ ಕಡೆದುಕೊಂಡಿದ್ದಾರೆ. ಬಸ್ ಪ್ರಯಾಣ ದರ ಏರಿಕೆಗೆ ನನ್ನ ವಿರೋಧವಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅವರ ಸಂಪುಟದ ಸಚಿವರು ಹಾಗೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಭ್ರಷ್ಟಾಚಾರ ನಿಮೂಲನೆ ಮಾಡುವ ಮನಸ್ಥಿತಿಯನ್ನು ಸಿಎಂ ಕಳೆದುಕೊಂಡಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳ ತಲೆ ದಂಡವಾಗುತ್ತಿದೆ ಎಂದು ಹೇಳಿದರು.

ಗುತ್ತಿಗೆದಾರ ಸಚಿನ ಪಾಂಚಾಳ ಅವರ ಆತ್ಮಹತ್ಯೆಯ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಬಂದಿದ್ದು, ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಈ ಪ್ರಕರಣದ ಕುರಿತು ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಧಾರವಾಡ ಪ್ರತ್ಯೇಕ ಪಾಲಿಕೆ ರಚನೆ ಸ್ವಾಗತಾರ್ಹ. ಈ ಮೊದಲು ಇದರ ಬಗ್ಗೆ ನಾನು ಸಹ ಧ್ವನಿ ಎತ್ತಿದ್ದೆ. ಧಾರವಾಡಿಗರ ಬೇಡಿಕೆ ಇದೇ ಆಗಿತ್ತು. ವಿಭಜನೆಯಿಂದ ಎರಡೂ ನಗರಗಳು ಅಭಿವೃದ್ಧಿಯಾಗುವ ಭರವಸೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net