

ಕಂಪ್ಲಿ: ಸರ್ಕಾರಿ ಅಧಿಕಾರಿಗಳು ಭ್ರಷ್ಟರಿಗೆ ಈಡಾಗಬಾರದು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕೆ.ರಾಮರಾವ್ ಹೇಳಿದರು.
ಇಲ್ಲಿನ ತಹಸಿಲ್ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿ ಸ್ವೀಕರಿಸಿ ಮಾತನಾಡಿ, ಸಕಾಲದಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಪಾರದರ್ಶಕವಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಅರ್ಜಿಗಳ ವಿಲೇವಾರಿ ತಾತ್ಸಾರ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡ ತಾಲೂಕು ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬ್ಲಡ್‌ಬ್ಯಾಂಕ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆಯೇ ? ನೂರು ಹಾಸಿಗೆ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆಯೇ ? ಆಡಳಿತಸೌಧ ಕಟ್ಟಡ ನಿರ್ಮಾಣ ಸಕಾಲದಲ್ಲಿ ಮುಗಿಯಲಿದೆಯೇ ? ಎಂದು ಇಲಾಖಾವಾರು ಮೂಲಸೌಕರ್ಯಗಳ ಕುರಿತು ಪ್ರಶ್ನಿಸಿದರು.
ಕಂಪ್ಲಿ ಪಟ್ಟಣದಲ್ಲಿ 2-3ಸಾವಿರ ಸಸಿ ನೆಡಲು ಪುರಸಭೆ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಿಒ ಡಾ.ಎನ್.ಶಿವಲಿಂಗಪ್ಪಗೆ ಸೂಚಿಸಿದರು.
ಪುರಸಭೆ ಆರ್‌ಒ ನಾಗಭೂಷಣ ಅವರನ್ನು ಪ್ರಶ್ನಿಸಿ, ನಮೂನೆ 3ನೀಡಲು ವಿಳಂಭವೇಕೆ ? ಎಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ನಿಂತಿವೆ ಎಂದು ಪ್ರಶ್ನಿಸಿದರು. ಕೂಡಲೇ ಎಲ್ಲಾ ಅರ್ಜಿಗಳನ್ನು ವಿಲೇವಾರಿಗೊಳಿಸುವಂತೆ ತಾಕೀತು ಮಾಡಿದರು.
ದೇವಸಮುದ್ರ ಕ್ರಾಸ್ ಬಳಿಯ ಸರ್ವೇ ನಂಬರ್ 254ರ ಸರ್ಕಾರಿ ಭೂಮಿಯಲ್ಲಿ 4,725ಮೆಟ್ರಿಕ್ ಟನ್ನ್‌ನಷ್ಟು ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗಿದೆ. ತಾಲೂಕಿನ ಆರುಕಡೆಗಳಲ್ಲಿ ಅನಧಿಕೃತ ಮಣ್ಣು ಸಾಗಿಸುತ್ತಿದ್ದ ತಪ್ಪಿತಸ್ಥರಿಗೆ ದಂಡ ವಿಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ. ಏ.5ರಂದು ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ 2 ಟಿಪ್ಪರ್‌ಗಳಿಗೆ ತಲಾ 33,400ರೂ. ದಂಡ ವಿಧಿಸಲಾಗಿದೆ ಎಂದರು.
ಸಮೀಕ್ಷೆ ಮಾಡಿ, ಒತ್ತುವರಿ ತೆರವುಗೊಳಿಸಿ ರಸ್ತೆ, ಚರಂಡಿ ನಿರ್ಮಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಎಚ್.ದೇವರಾಜ್‌ಗೆ ಸೂಚನೆ ನೀಡಿದರು.
ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಮಹಮ್ಮದ್ ರಫಿ ಮಾತನಾಡಿ, ಪುರಸಭೆ, ಕಂದಾಯ, ತಾಪಂ, ಎಸಿ ಮತ್ತು ಡಿಸಿಯವರಿಗೆ ಸಂಬಂಧಿಸಿದ ತಲಾ ಒಂದೊಂದರಂತೆ ಐದು ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಸಂಗಮೇಶ್, ತಹಸೀಲ್ದಾರ್ ಗೌಸಿಯಾಬೇಗಮ್, ತಾಪಂ ಇಒ ಕೆ.ಎಸ್.ಮಲ್ಲನಗೌಡ, ಸಿಒ ಡಾ.ಎನ್.ಶಿವಲಿಂಗಪ್ಪ ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.