

ಹುಬ್ಬಳ್ಳಿ: ಕಳೆದ ಒಂಭತ್ತೂವರೆ ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಪಾರದರ್ಶಕ ಆಡಳಿತ ನಡೆಸುತ್ತಿದ್ದಾರೆ. ಹಾಗಾಗಿ ಮತ್ತೊಮ್ಮೆ ಅವರು ಪ್ರಧಾನಿ ಆಗಬೇಕು. ಇದೇ ದೃಷ್ಟಿಯಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್‌ನ 28 ಅಭ್ಯರ್ಥಿಗಳನ್ನು ಗೆಲ್ಲಸಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ ಹೇಳಿದರು.
ಇಲ್ಲಿಯ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಧಾರವಾಡ ಲೋಕಸಭೆಯ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿ ತಂದಿಟ್ಟಿದೆ. ಬಾಂಬ್ ಸ್ಫೋಟ ಪ್ರಕರಣವನ್ನು ಸಿದ್ದರಾಮಯ್ಯ ಅವರು ಗಂಭೀರವಾಗಿ ತೆಗೆದುಕೊಳ್ಳದೇ ಮೊದಲು ಇಂಥ ಘಟನೆಗಳು ಆಗಿಲ್ಲವೇ? ಎಂದು ಪ್ರಶ್ನೆ ಮಾಡುತ್ತಾರೆ. ಪಾಕಿಸ್ತಾನ ಜಿಂದಾಬಾದ್ ಎಂದರೆ ಹಾಗೆ ಹೇಳಿಯೇ ಇಲ್ಲ ಎನ್ನುತ್ತಾರೆ. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿಕೊಂಡಿದೆ ಎಂದರು.
ಎಂಎಲ್‌ಸಿ ಕೆ. ನವೀನಕುಮಾರ ಮಾತನಾಡಿ, ಬಿಜೆಪಿಯ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಇದರಿಂದ ನಾವು ಚುನಾವಣಾ ತಯಾರಿ ನಡೆಸಲು ಅನುಕೂಲವಾಗಿದೆ. ಏಪ್ರಿಲ್ ಮೂರನೇ ವಾರದಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗಬಹುದು. ಈ ನಿಟ್ಟಿಯಲ್ಲಿ ಬಿಜೆಪಿಯಿಂದ ಚುನಾವಣಾ ರೂಪುರೇಷೆ ಸಿದ್ಧಗೊಳಿಸಿಕೊಳ್ಳಲಾಗಿದೆ ಎಂದರು.
ಮಾಜಿ ಶಾಸಕಿ ಸೀಮಾ ಮಸೂತಿ, ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ಲಿಂಗಪ್ಪ ಸುತಗಟ್ಟಿ, ಪ್ರಮುಖರಾದ ವಿಜಯಾನಂದ ಶೆಟ್ಟಿ, ಶಶಿಮೌಳಿ ಕುಲಕರ್ಣಿ, ಸಂಜಯ ಕಪಟಕರ, ಬಸವರಾಜ ಕುಂದಗೋಳಮಠ, ರವಿ ನಾಯಕ ಇತರರು ಇದ್ದರು.