

ಕಾಗವಾಡ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಕಲುಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ ತಿಳಿಸಿದರು.
ತಾಲೂಕಿನ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಾ.21ರಿಂದ ಏ.4ರ ವರೆಗೆ ಜರುಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 6 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದ್ದು, ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ನಕಲು ಹಾಗೂ ಅವ್ಯವಹಾರ ನಡೆಯದಂತೆ ಸಂಬಂಧಿತ ಅಧಿಕಾರಿಗಳು ಗಮನಹರಿಸಬೇಕು. ಒಟ್ಟು 36 ಪ್ರೌಢಶಾಲೆಗಳಿಂದ ಒಟ್ಟು 2352 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಎಲ್ಲ ಕೇಂದ್ರಗಳಿಗೆ ಸಕಾಲಕ್ಕೆ ಪ್ರಶ್ನೆ ಪತ್ರಿಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಅಕ್ರಮ ತಡೆಗೆ 144 ಕಲಂ ಜಾರಿಗೊಳಿಸಲಾಗಿದ್ದು, ತಾಲೂಕು ಮಟ್ಟದ 3 ಜಾಗೃತ ತಂಡ ರಚಿಸಲಾಗಿದೆ. ಅಲ್ಲದೆ ಪ್ರತಿ ಕೇಂದ್ರದಲ್ಲಿ ಸ್ಥಾನಿಕ ಜಾಗೃತ ದಳ ನಿಯೋಜಿಸಲಾಗಿದೆ. ಪರೀಕ್ಷೆಗಳು ಬರೆಯಲು ಆಸನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ, ಅಂಗವಿಕಲರಿಗೆ ವ್ಹೀಲ್‌ಚೇರ್ ವ್ಯವಸ್ಥೆ ಹಾಗೂ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಆರೋಗ್ಯ ಸಹಾಯಕಿಯನ್ನು ನೇಮಿಸಲಾಗಿದೆ ಎಂದರು.
ತಾಪಂ ಇಒ ವೀರಣ್ಣ ವಾಲಿ, ಗ್ರೇಡ್-2 ತಹಸೀಲ್ದಾರ್ ರಶ್ಮಿ ಜಕಾತಿ, ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಸುಣ್ಣದಕಲ್ಲ, ಎಎಸ್‌ಐ ಎಸ್.ಬಿ.ಸೋನಾವನೆ ಇತರರಿದ್ದರು.