

ಮೈಸೂರು: ಒಕ್ಕಲಿಗರ ಎರಡು ಮಠ ಮಾಡಲು ಹೊರಟಿದ್ದವರು, ಸರ್ಕಾರ ಬೀಳಿಸಿದವರನ್ನೇ ಕರೆದುಕೊಂಡು ನಮ್ಮ ಸ್ವಾಮೀಜಿ ಭೇಟಿ ಮಾಡಲು ಹೋಗಿರುವುದು ಹಾಸ್ಯಾಸ್ಪದ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ನಿಮಿತ್ತ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಒಕ್ಕಲಿಗ ಮುಖಂಡರ ಸಭೆಯಲ್ಲಿ ಮಾತನಾಡಿದರು.
ನನಗೆ ಬೆನ್ನಿಗೆ ಚೂರಿ ಹಾಕಿದರು ಎಂದು ನಿತ್ಯ ನಿಂದನೆ ಮಾಡುತ್ತಿದ್ದಾರೆ. ಆದರೆ ವೈರತ್ವವನ್ನು ಮರೆತು ಸಿದ್ದರಾಮಯ್ಯ ಅವರ ಕೈಯಲ್ಲಿ ಬರೆಸಿ ಕುಮಾರಸ್ವಾಮಿ ಅವರಿಗೆ ಅಧಿಕಾರ ಕೊಟ್ಟೆವು. ಆದರೆ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ತೋರಲಿಲ್ಲ. ಹೋಟೆಲ್ನಲ್ಲಿ ಕುಳಿತವರು ಹೊರಗೆ ಬರಲೇ ಇಲ್ಲ ಎಂದು ಟೀಕಿಸಿದರು.
ಹೀಗಾದರೆ ಹೇಗೆ ರಾಜಕಾರಣ ಮಾಡಲು ಸಾಧ್ಯ. 13 ಜನ ಶಾಸಕರು ಸೇರಿಕೊಂಡು ಕುಮಾರಸ್ವಾಮಿ ಅವರನ್ನು ಕೆಳಗೆ ಇಳಿಸಿದರು. ನಾನು ಹೋರಾಟ ಮಾಡಿದರೂ ಬಿಜೆಪಿಯವರಿಂದ ಅದು ಈಡೇರಲಿಲ್ಲ ಎಂದರು.
ಈಗ ಯಾರು ಇವರಿಗೆ ಚೂರಿ ಹಾಕಿದರೋ, ಅಧಿಕಾರದಿಂದ ಇಳಿಸಿದರೋ ಅವರನ್ನು ಸ್ವಾಮೀಜಿ ಬಳಿ ಕರೆದುಕೊಂಡು ಹೋದರು. ಮಠ ಎರಡು ಮಾಡಲು ಹೊರಟಿದ್ದವರಿಗೆ ಈಗ ಸ್ವಾಮೀಜಿ, ಮಠ ಬೇಕಾಗಿದೆ ಎಂದು ಆರೋಪಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಮಂಡ್ಯದಿಂದ ನಿಲ್ಲು ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಅವರು ತಾವೇ ನಿಂತುಕೊಂಡರು. ಹೆಣ್ಣು ನೋಡಲು ಹೋಗಿ ತಾವೇ ಮದುವೆ ಆದಂತೆ ಅಗಿದೆ ಎಂದು ಮೂದಲಿಸಿದರು.
ನಾನು ನನ್ನ ಸಮಾಜಕ್ಕೆ ಹೆದರುತ್ತೇನೆಯೇ ಹೊರತು, ಕುಮಾರಸ್ವಾಮಿಗೆ ಹೆದರುವ ಮಾತೇ ಇಲ್ಲ. ನಾನು ನಿಮ್ಮೂರಿನ (ಮೈಸೂರು) ಅಳಿಯ ಬೇರೆ, ಜವಾಬ್ದಾರಿ ಇದೆ. ಇದು ಐದು ವರ್ಷಗಳ ಸರ್ಕಾರ ಅಲ್ಲ, ಹತ್ತು ವರ್ಷಗಳ ಸರ್ಕಾರ ಮಾಡಬೇಕು. ನಾನು ಸುಮ್ಮನೆ ಬಂದಿಲ್ಲ, ಈ ಸ್ಥಾನಕ್ಕೆ ಬರಲು ಎಷ್ಟು ಇಡಿ, ಎಷ್ಟು ಐಟಿ ಎಷ್ಟೆಲ್ಲ ಕಷ್ಟ ಅನುಭವಿಸಿದ್ದೇನೆ ಗೊತ್ತಾ? ಎಂದರು.
ರಾಜ್ಯದಲ್ಲಿ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ನೀಡಿದೆ. ಮೈಸೂರು ಸೇರಿದಂತೆ ಎಲ್ಲ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ಪ್ರತಾಪಸಿಂಹ, ಸದಾನಂದಗೌಡ ಅವರಿಗೆ ಟಿಕೆಟ್ ನೀಡಿಲ್ಲ. ಬಿಜೆಪಿಯಲ್ಲಿ ನಮ್ಮ ಸಮಾಜಕ್ಕೆ ಅವಕಾಶ ಇಲ್ಲ, ಜೆಡಿಎಸ್ ಕಥೆ ನಿಮಗೇ ಗೊತ್ತು. ಈ ಬಾರಿ 19 ಸ್ಥಾನವನ್ನು ಪಡೆದಿದ್ದಾರೆ, ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂದರು.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಎಲ್ಲ ಸಮಾಜದ ಜತೆಗೆ ಈ ರಾಜ್ಯದ ಎಲ್ಲ ವರ್ಗದ ಜನರನ್ನು ಪ್ರೀತಿಯಿಂದ ಕಾಣುವ ಜನಾಂಗ ನಮ್ಮದು. ಜನಾಂಗ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವವರನ್ನು ಇನ್ನು ಎಷ್ಟು ದಿನ ನಂಬುತ್ತೀರಾ. ಜನಾಂಗದ ಮುಖಂಡರಿಗೆ ಅವರು ತುಂಬ ನೋವು ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಮಾಡಿರುವ ಬಿಜೆಪಿ-ಜೆಡಿಎಸ್ ಅನ್ನು ನೋಡುತ್ತಾ ಇದ್ದೀರಿ. ಬರಗಾಲದ ವಿಚಾರದಲ್ಲಿ, ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಾ ಇದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಸಹೋದರರಂತೆ ಅಧಿಕಾರ ನಡೆಸುತ್ತಿದ್ದಾರೆ. ಅವರಿಗೆ ಶಕ್ತಿ ತುಂಬಬೇಕು ಎಂದು ಕೋರಿದರು.
ಬಿಜೆಪಿ-ಜೆಡಿಎಸ್‌ನಿಂದ ಒಕ್ಕಲಿಗ ಜನಾಂಗಕ್ಕೆ ಕೆಲವು ಸ್ಥಾನದಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಅದರಲ್ಲಿಯೂ ಮೂರು ಸ್ಥಾನಗಳನ್ನು ಒಂದೇ ಕುಟುಂಬಕ್ಕೆ ನೀಡಲಾಗಿದೆ. ಜನಾಂಗದ ಇತರರಿಗೆ ಅವಕಾಶವನ್ನೇ ನೀಡಿಲ್ಲ ಎಂದು ಆರೋಪಿಸಿದರು.
ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ಒಂದೇ ಕುಟುಂಬದ ಜನರು ಈ ರಾಜ್ಯದ ಒಕ್ಕಲಿಗ ಜನರನ್ನು ಮರಳು ಮಾಡಿ ಅಧಿಕಾರ ಅನುಭವಿಸಿದ್ದಾರೆ. ಬೇರೆಯವರಿಗೆ ಅವಕಾಶವನ್ನೇ ನೀಡುತ್ತಿಲ್ಲ. ತಮ್ಮ ಸ್ವಾರ್ಥ ಸಾಧನೆಗಾಗಿ ಒಕ್ಕಲಿಗ ಇತರ ನಾಯಕರನ್ನೇ ತುಳಿಯುತ್ತಾ ತಾವೊಬ್ಬರೇ ಎನ್ನುವ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಕೆ.ಹರೀಶ್‌ಗೌಡ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮರಿತಿಬ್ಬೇಗೌಡ ಇತರರು ಮಾತನಾಡಿದರು.
ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಚಾಮರಾಜ ಕ್ಷೇತ್ರದ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ಮುಖಂಡರಾದ ಮಾರ್ಕೆಟ್ ದಿನೇಶ್, ಡಾ.ಸುಶೃತ್‌ಗೌಡ, ಕೂರ್ಗಳ್ಳಿ ಮಹಾದೇವು, ಮಂಜುಳಾ ಮಾನಸ, ಸುಶೀಲಾ ನಂಜಪ್ಪ ಇತರರಿದ್ದರು.