

ಆರ್.ಕೃಷ್ಣ ಮೈಸೂರು
ಪ್ರವಾಸಿತಾಣ, ಸಾಂಸ್ಕೃತಿಕ ನಗರಿಯನ್ನು ಭಿಕ್ಷುಕ ಮುಕ್ತಗೊಳಿಸಲು ಯೋಜನೆ ರೂಪಿಸಿದ್ದರೂ ನಿರಾಶ್ರಿತರಿಗೆ ಆಶ್ರಯ ನೀಡಲು ಕಾರ್ಯಾರಂಭ ಮಾತ್ರ ದೂರದ ಮಾತಾಗಿದೆ.
ಜನಸಂಖ್ಯೆಗೆ ಅನುಗುಣವಾಗಿ ನಗರದಲ್ಲಿ ಹೆಚ್ಚುವರಿ ನಾಲ್ಕು ನಿರಾಶ್ರಿತರ ಕೇಂದ್ರ ಸ್ಥಾಪಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಕೇಂದ್ರಗಳ ಆರಂಭ ಈಗ ಕೇವಲ ಕಾಗದದಲ್ಲಿ ಇದೆ. ಇದು ಅಧಿಕಾರಿಗಳ ಇಚ್ಛಾಶಕ್ತಿಗೆ ಸಾಕ್ಷಿಯಾದಂತಾಗಿದೆ.
ಕುಟುಂಬದಿಂದ ದೂಡಲ್ಪಟ್ಟವರು, ಸೂರಿಲ್ಲದವರು, ರಸ್ತೆ ಬದಿಯಲ್ಲಿ ಜೀವನ ಕಳೆಯುವವರಿಗಾಗಿ ನಗರದಲ್ಲಿ ನಿರಾಶ್ರಿತ ಕೇಂದ್ರಗಳು ಕಾರ್ಯಾರಂಭ ಮಾಡಬೇಕು. ಅವರಿಗೆ ಕನಿಷ್ಠ ಮೂಲಸೌಲಭ್ಯ ಒದಗಿಸಬೇಕು ಎನ್ನುವ ಆದೇಶವಿದೆ.
ಹೈಕೋರ್ಟ್ ಆದೇಶದಂತೆ ಮೈಸೂರು ನಗರದಲ್ಲಿ ನಾಲ್ಕು ಹೆಚ್ಚುವರಿ ನಿರಾಶ್ರಿತರ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಮಾಹಿತಿ ನೀಡಿದ್ದ ಪಾಲಿಕೆ ಅಧಿಕಾರಿಗಳು 3 ವರ್ಷ ಕಳೆದರೂ ನಿರಾಶ್ರಿತರ ಕೇಂದ್ರ ಸ್ಥಾಪಿಸುವ ಗೋಜಿಗೆ ಹೋಗಿಲ್ಲ.
ಹೀಗಾಗಿ ಕೇಂದ್ರ ಸ್ಥಾಪನೆಯ ಘೋಷಣೆ ಪತ್ರದಲ್ಲಿ ಮಾತ್ರ ಉಳಿದಂತೆ ಅಗಿದೆ. ಇದರಿಂದ ನಿರಾಶ್ರಿತರ ಬದುಕು ಅತಂತ್ರವಾಗಿ ರಸ್ತೆ ಬದಿಯೇ ಜೀವನ ನಡೆಸುವಂತಾಗಿದೆ.
ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಒಂದು ನಿರಾಶ್ರಿತರ ಕೇಂದ್ರ ಇರಬೇಕು ಎಂದು ಸುಪ್ರೀಂಕೋರ್ಟ್ 2019ರಲ್ಲಿ ಕಟ್ಟುನಿಟ್ಟಿನ ಆದೇಶ ನೀಡಿದೆ. ಆದರೆ, ಇದನ್ನು ಅನುಷ್ಠಾನಗೊಳಿಸದ ಕಡೆಗಳಲ್ಲಿ ಅನುಷ್ಠಾನ ಮಾಡುವಂತೆ ಹಲವು ಸ್ವಯಂಸೇವಾ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದವು.
ಸುಪ್ರೀಂ ಕೋರ್ಟ್ ಆದೇಶಂತೆ ರಾಜ್ಯದ ಎಲ್ಲ ನಗರ ಮತ್ತು ಜಿಲ್ಲೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನಿರಾಶ್ರಿತರ ಕೇಂದ್ರ ತೆರೆಯುವಂತೆ ಹೈಕೋರ್ಟ್ ಕೂಡ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ನ್ಯಾಯಾಲಯದ ಆದೇಶದಂತೆ ಮೈಸೂರು ನಗರದಲ್ಲಿಯೂ 9 ವಲಯ ಕಚೇರಿ ವ್ಯಾಪ್ತಿಯಲ್ಲಿ 9 ನಿರಾಶ್ರಿತರ ಕೇಂದ್ರ ಸ್ಥಾಪಿಸಬೇಕು ಎಂಬುದರ ಬಗ್ಗೆ ಚರ್ಚೆಯಾಯಿತು. ಈಗಾಗಲೇ ಒಂದು ನಿರಾಶ್ರಿತರ ಕೇಂದ್ರವಿದ್ದು, ಹೆಚ್ಚುವರಿಯಾಗಿ ನಾಲ್ಕು ಕೇಂದ್ರಗಳನ್ನು ಸ್ಥಾಪಿಸುವುದಾಗಿ ಲಿಖಿತ ಮಾಹಿತಿ ನೀಡಲಾಗಿತ್ತು. ಆದರೆ ಪಾಲಿಕೆ ಅಧಿಕಾರಿಗಳು ನಮ್ಮಲ್ಲಿ ಅಷ್ಟು ಜನ ನಿರಾಶ್ರಿತರು ಇಲ್ಲ ಎನ್ನುವ ಕಾರಣ ನೀಡಿ 2021ರಲ್ಲಿ ನಗರದ ನಾಲ್ಕು ಕಡೆ ನಿರಾಶ್ರಿತರ ಕೇಂದ್ರವನ್ನು ನಾಮ್ ಕೆ ವಾಸ್ತೆ ಸ್ಥಾಪಿಸಿ ನ್ಯಾಯಾಲಯದ ಕೆಂಗಣ್ಣಿನಿಂದ ಪಾರಾಗಿದ್ದಾರೆ. ಆದರೆ ಪಾಲಿಕೆ ಆರಂಭಿಸಿರುವ ನಿರಾಶ್ರಿತ ಕೇಂದ್ರಗಳಲ್ಲಿ ಯಾವುದೇ ಮೂಲಸೌಲಭ್ಯವೂ ಇಲ್ಲದೆ, ನಿರಾಶ್ರಿತರೂ ಇಲ್ಲದೆ ದಾಖಲೆಯಲ್ಲಿ ಮಾತ್ರ ಕೇಂದ್ರಗಳು ಉಳಿದಂತಾಗಿದೆ.
50 ಜನರಿಗಷ್ಟೇ ಸೂರು
ನಗರಪಾಲಿಕೆಯ ದಾಖಲೆಯಲ್ಲಿರುವ ನಿರಾಶ್ರಿತರ ಕೇಂದ್ರಗಳಲ್ಲಿ 200 ಜನರಿಗೆ ಆಶ್ರಯ ಕಲ್ಪಿಸಲು ಅವಕಾಶವಿದೆ. ಇತ್ತೀಚೆಗೆ ಸಂಗ್ರಹಿಸಿರುವ ಅಂಕಿ-ಅಂಶಗಳ ಆಧಾರದಲ್ಲಿ 200ಕ್ಕೂ ಹೆಚ್ಚು ನಿರಾಶ್ರಿತರು, ಭಿಕ್ಷುಕರು ಇದ್ದರೂ ಅವರಿಗೆ ಆಶ್ರಯ ನೀಡಿಲ್ಲ. ಹೆಚ್ಚು ನಿರಾಶ್ರಿತರು ಸಿಕ್ಕಿಲ್ಲ ಎನ್ನುವ ಕಾರಣ ನೀಡಿ, ಸಧ್ಯ ಈಗಾಗಲೇ ನಗರದ ಆರ್‌ಎಂಸಿ ಬಳಿಯಿರುವ ಕೇಂದ್ರದಲ್ಲಿ 50 ಜನರಿಗೆ ಮಾತ್ರ ಆಶ್ರಯ ನೀಡಲಾಗಿದೆ.
ಕೇಂದ್ರದಲ್ಲಿ ದಿನವಿಡೀ ತಂಗಲು ಅವಕಾಶ, ಶೌಚಗೃಹ ವ್ಯವಸ್ಥೆ ಇರಬೇಕು. ರಾತ್ರಿ ಹೊತ್ತು ಊಟದ ವ್ಯವಸ್ಥೆ, ಮನರಂಜನಾ ಸೌಲಭ್ಯ ಕೂಡ ಇರಬೇಕು. ಅಲ್ಲದೆ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ವೈದ್ಯಕೀಯ ತಪಾಸಣೆ ನಡೆಸಬೇಕು. ಈ ಮೂಲಕ ನಿರಾಶ್ರಿತರಿಗೆ ಆಶ್ರಯ ನೀಡುವ ಮೂಲಕ ನೆಮ್ಮದಿಯುತ ಜೀವನ ನಡೆಸಲು ಸಹಕರಿಸಬೇಕು ಎನ್ನುವ ನಿಯಮವಿದೆ. ಆದರೆ ಅದು ಸದ್ಯಕ್ಕೆ ಪಾಲನೆ ಅಗುತ್ತಿಲ್ಲ.
ಎಲ್ಲೆಲ್ಲಿ ನಿರಾಶ್ರಿತ ಕೇಂದ್ರಗಳು?
ಈಗಾಗಲೇ ನಗರದ ಆರ್‌ಎಂಸಿ ಬಳಿ ಇರುವ ನಿರಾಶ್ರಿತರ ಕೇಂದ್ರ ಹೊರತುಪಡಿಸಿ ಸಿದ್ದಾರ್ಥನಗರದ ಸಿಐಟಿಬಿ ಛತ್ರ, ಜಯನಗರದ ಪೈಲ್ವಾನ್ ಸಮುದಾಯ ಭವನ, ನಜರ್‌ಬಾದ್‌ನ ಉದ್ಯಾನದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ, ಗೋಕುಲಂನಲ್ಲಿರುವ ಸಮುದಾಯ ಭವನ ಹೀಗೆ ನಾಲ್ಕು ಕಟ್ಟಡಗಳನ್ನು ಗುರುತಿಸಿ ಅಲ್ಲಿ ನಿರಾಶ್ರಿತರ ಕೇಂದ್ರ ಸ್ಥಾಪಿಸಲಾಗಿದೆ.
ಸಿದ್ದಾರ್ಥನಗರ ಮತ್ತು ಜಯನಗರದಲ್ಲಿ ಕೇಂದ್ರವನ್ನು ಪುರುಷರಿಗೆ ಮೀಸಲಿರಿಸಿ 100 ಜನರಿಗೆ ಆಶ್ರಯ ಕಲ್ಪಿಸಲು ನಿರ್ಧರಿಸಲಾಗಿದೆ. ಹಾಗೆಯೇ ನಜರ್‌ಬಾದ್ ಮತ್ತು ಗೋಕುಲಂನಲ್ಲಿರುವ ಸಮುದಾಯ ಭವನದಲ್ಲಿ 50 ಜನ ನಿರಾಶ್ರಿತ ಮಹಿಳೆಯರಿಗೆ ಸೂರು ಕಲ್ಪಿಸಬಹುದಾಗಿದೆ ಎನ್ನುವುದು ದಾಖಲೆಯಲ್ಲಿದೆ. ಆದರೆ, ಈ ನಾಲ್ಕು ಕಡೆ ಕೇಂದ್ರವಿದೆ ಎನ್ನುವ ಮಾಹಿತಿ ಇದೆಯೇ ಹೊರತು ಅವು ಕಾರ್ಯಾರಂಭ ಮಾಡಿ ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವ ಕೆಲಸ ಮಾಡಿಲ್ಲ.
ಸೂಕ್ತ ಕ್ರಮ ಕೈಗೊಳ್ಳಲಾಗುವುದು
ನ್ಯಾಯಾಲಯದ ಆದೇಶದಂತೆ ನಗರದಲ್ಲಿ ನಾಲ್ಕು ನಿರಾಶ್ರಿತರ ಕೇಂದ್ರಗಳ ಆರಂಭಿಸಲಾಗಿದೆ. ಆದರೆ ಅವು ಯಾವ ಸ್ಥಿತಿಗತಿಯಲ್ಲಿವೆ, ನಿರಾಶ್ರಿತರನ್ನು ಯಾಕೆ ಕರೆ ತರುತ್ತಿಲ್ಲ ಎನ್ನುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಡಾ. ಎನ್.ಎನ್. ಮಧು ಆಯುಕ್ತರು, ನಗರಪಾಲಿಕೆ
ಕೇಂದ್ರ ಆರಂಭಿಸಲು ಕ್ರಮಕೈಗೊಳ್ಳಲಿ
ನಗರದಲ್ಲಿರುವ ಜನಸಂಖ್ಯೆ ಹಾಗೂ ನಿರಾಶ್ರಿತರಿಗೆ ತಕ್ಕಂತೆ ನಿರಾಶ್ರಿತರ ಕೇಂದ್ರಗಳು ಇಲ್ಲ. ಹೀಗಾಗಿ ನಗರದ ರಸ್ತೆ ಬದಿ, ಬಸ್ ನಿಲ್ದಾಣ, ಹಳೇ ಕಟ್ಟಡದಲ್ಲಿ ನಿರಾಶ್ರಿತರು ಆಶ್ರಯ ಪಡೆಯುತ್ತಿದ್ದಾರೆ. ಪ್ರವಾಸಿತಾಣವಾದ ನಗರಕ್ಕೆ ಇದು ಕಪ್ಪು ಚುಕ್ಕೆಯಾಗಲಿದೆ. ಜತೆಗೆ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕೇಂದ್ರಗಳನ್ನು ತೆರೆಯಲು ಆದ್ಯತೆ ನೀಡಬೇಕಿದೆ.
ಡಾ.ಎಂ.ಪಿ.ವರ್ಷಾ
ವ್ಯವಸ್ಥಾಪಕ ಟ್ರಸ್ಟಿ, ಕ್ರೆಡಿಟ್ ಐ ಸಂಸ್ಥೆ