ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೆ ಭಾನುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಭೇಟಿ ಮಾಡಿ ಮಾತುಕತೆ ನಡೆಸಿದರು.
ನಗರದ ಜಯಲಕ್ಷ್ಮೀಪುರಂನಲ್ಲಿರುವ ವಿ.ಶ್ರೀನಿವಾಸ ಪ್ರಸಾದ್ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದರಲ್ಲದೆ, ಪ್ರಧಾನಿ ನರೇಂದ್ರಮೋದಿ ಅವರು ಭಾಗವಹಿಸುವ ಸಮಾವೇಶದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದರು.
ಆದರೆ ಆಹ್ವಾನವನ್ನು ನಯವಾಗಿಯೇ ನಿರಾಕರಿಸಿದ ಶ್ರೀನಿವಾಸಪ್ರಸಾದ್ ಅವರು, ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತನಾಗಿದ್ದೇನೆ. ಅಲ್ಲದೆ, ಆರೋಗ್ಯವೂ ಸರಿಯಾಗಿ ಇಲ್ಲ. ಹಾಗಾಗಿ ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಮೋದಿ ಅವರು ಆಗಮಿಸಿದಾಗ ಸ್ವಾಗತಿಸಿ ವಾಪಸ್ ಬರುವಂತೆ ಯಡಿಯೂರಪ್ಪ ಅವರು ಪ್ರಸಾದ್ ಅವರ ಮನವೊಲಿಸಲು ಮುಂದಾದರು. ಆಗ ನೋಡೋಣ ಎಂದಷ್ಟೇ ಶ್ರೀನಿವಾಸಪ್ರಸಾದ್ ಪ್ರತಿಕ್ರಿಯಿಸಿದರು.
ನರೇಂದ್ರ ಮೋದಿ ಅವರು ಜಾಗತಿಕ ನಾಯಕರು. ಅವರ ಜತೆ ಐದು ವರ್ಷ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ಮೋದಿ ನಾನು ಕಂಡ ಅತ್ಯಂತ ಒಳ್ಳೆಯ ಪ್ರಧಾನಮಂತ್ರಿ. ಬಿಜೆಪಿ ವಿರುದ್ಧ ನಾನು ಏನನ್ನೂ ಮಾತನಾಡುವುದಿಲ್ಲ ಎಂದರು.
ಯಡಿಯೂರಪ್ಪ ಅವರು ಮನೆಗೆ ಬಂದಿದ್ದರು, ಮನೆಗೆ ಬಂದವರನ್ನು ಸೌಜನ್ಯದಿಂದ ಬರಮಾಡಿಕೊಳ್ಳುವುದು ಕರ್ತವ್ಯ. ಕಾರ್ಯಕ್ರಮಕ್ಕೆ ಬರುವಂತೆ ಕರೆದಿದ್ದಾರೆ. ಖಡಾಖಂಡಿತವಾಗಿ ಬರಲು ಆಗುವುದಿಲ್ಲ ಎಂದು ಹೇಳಲು ಆಗೋದಿಲ್ಲ. ಸೌಜನ್ಯದಿಂದ ಬಂದಾಗ ಪ್ರೀತಿಯಿಂದ ಮಾತನಾಡಿದ್ದೇನೆ. ಕಾರ್ಯಕ್ರಮಕ್ಕೆ ಹೋಗುವುದು ಬಿಡುವುದು ನಮ್ಮ ತೀರ್ಮಾನ ಎಂದು ಬಳಿಕ ಸುದ್ದಿಗಾರರಿಗೆ ಶ್ರೀನಿವಾಸಪ್ರಸಾದ್ ಹೇಳಿದರು.
ಇವರನ್ನು ನೋಡಿಕೊಳ್ಳಿಯಪ್ಪ ಎಂದು ಭಾವುಕ:
ನಂಜನಗೂಡು ಮಾಜಿ ಶಾಸಕ, ಅಳಿಯ ಹರ್ಷವರ್ಧನ್ ಆಗಮಿಸುತ್ತಿದ್ದಂತೆ ಮುಗುಳು ನಗೆ ಬೀರಿದ ಶ್ರೀನಿವಾಸಪ್ರಸಾದ್ ಅವರು, ಇವರನ್ನು ನೋಡಿಕೊಳ್ಳಿಯಪ್ಪ ಎಂದು ಪ್ರೀತಮ್ಗೌಡ ಅವರ ಕೈ ಹಿಡಿದುಕೊಂಡು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹಾಸನ ಮಾಜಿ ಶಾಸಕ ಪ್ರೀತಂಗೌಡ ಅವರು, ನಾವಿದ್ದೇವೆ. ನಾವು ಯಾರನ್ನೂ ಕೈ ಬಿಡುವುದಿಲ್ಲ ಎಂದು ಭರವಸೆ ನೀಡಿದಾಗ ಶ್ರೀನಿವಾಸಪ್ರಸಾದ್ ಅವರು ಕ್ಷಣ ಕಾಲ ಭಾವುಕರಾಗಿ ಪ್ರೀತಮ್ ಗೌಡ ನೇರವಾಗಿ ಮಾತನಾಡುವವರು. ಇಂತಹವರು ರಾಜಕಾರಣದಲ್ಲಿ ಇರಬೇಕು ಎಂದು ಹೊಗಳಿದರು. ಶ್ರೀನಿವಾಸಪ್ರಸಾದ್ ಅವರ ಮತ್ತೊಬ್ಬ ಅಳಿಯ ಡಾ ಮೋಹನ್ ಇದ್ದರು.
ವೈಯಕ್ತಿಕ ಲಾಭಕ್ಕೆ ಹೋಗಿದ್ದಾರೆ:
ಸಂಸದ ವಿ.ಶ್ರೀನಿವಾಸಪ್ರಸಾದ್ ಬೆಂಬಲಿಗರು ಹಾಗೂ ಕುಟುಂಬಸ್ಥರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾಜಿ ಶಾಸಕ ಹರ್ಷವರ್ಧನ್ ಕಿಡಿಕಾರಿದರು.
ಅವರು ವೈಯಕ್ತಿಕ ಲಾಭಕ್ಕಾಗಿ ಹೋಗಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಇದರಿಂದ ಅವರು ಹೋಗಿದ್ದಾರೆ. ಇದರಲ್ಲಿ ವೈಯಕ್ತಿಕ ಲಾಭ ಬಿಟ್ಟು ಬೇರೆ ಏನಿಲ್ಲ ಎಂದು ಪ್ರತಿಕ್ರಿಯಿಸಿದರು.
ಶ್ರೀನಿವಾಸಪ್ರಸಾದ್ ಅಭಿಮಾನಿಗಳು ಲಕ್ಷಾಂತರ ಜನರು ಇದ್ದಾರೆ. ಕಟ್ಟಾ ಬೆಂಬಲಿಗರು ಯಾವುದೇ ಸಭೆ ಸಮಾರಂಭ ಮಾಡಿ ಯಾರಿಗೂ ಬೆಂಬಲ ವ್ಯಕ್ತಪಡಿಸಿಲ್ಲ. ಕೆಲವರು ವೈಯಕ್ತಿಕ ರಾಜಕೀಯ ಹಿತಾಸಕ್ತಿಯಿಂದ ಹೋಗಿದ್ದಾರೆ. ಈ ರೀತಿ ಹೋಗಿರುವವರಿಗೆ ಯಾವುದೇ ಮತ ಬ್ಯಾಂಕ್ ಇಲ್ಲ ಎಂದರು.
ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗೋದಿಲ್ಲ. ನನ್ನನ್ನು ಕಾಂಗ್ರೆಸ್ ನಾಯಕರು ಸಂಪರ್ಕ ಮಾಡುವ ಪ್ರಯತ್ನವನ್ನೂ ಮಾಡಿಲ್ಲ. ಅವರಿಗೆ ಹರ್ಷವರ್ಧನ್ ಏನು ಎಂದು ಗೊತ್ತು, ಅದಕ್ಕೆ ನನ್ನನ್ನು ಅವರು ಸಂಪರ್ಕ ಮಾಡಿಲ್ಲ ಎಂದು ಹೇಳಿದರು.
ನಾನು ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಹಗಲಿರುಳು ಪ್ರಯತ್ನಿಸುತಿದ್ದೇನೆ. ನಮ್ಮ ಅಭ್ಯರ್ಥಿ ಬಾಲರಾಜ್ ಒಳ್ಳೆಯ ಹೆಸರಿರುವ ಅಭ್ಯರ್ಥಿಯಾಗಿದ್ದು, ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ವಾತಾವರಣ ಇದೆ ಎಂದು ಪ್ರತಿಕ್ರಿಯಿಸಿದರು.
ಮಾವನವರಿಗೆ ಆರೋಗ್ಯ ಸರಿಯಿಲ್ಲ. ವಾರದ ಹಿಂದೆ ಕಾಲಿಗೆ ಗಾಯವಾಗಿದ್ದು, ಜಾಸ್ತಿ ನಡೆಯಲು, ಕೂರಲು ಆಗಲ್ಲ. ಒಂದು ವಾರದ ಹಿಂದೆಯೇ ಮೈಸೂರು ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮತ್ತು ಚಾಮರಾಜನರ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ನಿರಂಜನ್ ಕುಮಾರ್ ಆಹ್ವಾನ ಕೊಟ್ಟಿದ್ದರು. ಆಗ ನಾನು ಅವರು ಬರಲು ಸಾಧ್ಯ ಆಗೋದಿಲ್ಲ ಅಂತ ಹೇಳಿದ್ದರು. ಆದರೆ ಈಗ ಪ್ರಸಾದ್ ಅವರನ್ನು ನೋಯಿಸಿದ ಕೆಲವರು ಇದನ್ನೇ ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅವರು ಎಲ್ಲಿಯೂ, ಯಾರ ಬಳಿಯೂ ಬೆಂಬಲದ ಬಗ್ಗೆ ಮಾತನಾಡಿಲ್ಲ ಎಂದರು.
ಮಾಜಿ ಶಾಸಕ ಪ್ರೀತಮ್ ಗೌಡ, ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮುಖಂಡ ರಘು ಕೌಟಿಲ್ಯ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಇದ್ದರು.
ಕೆಲಕಾಲ ಗೌಪ್ಯ ಮಾತುಕತೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಮಾಧ್ಯಮದವರನ್ನು ಹೊರಗಿಟ್ಟು ಕೆಲಕಾಲ ಗೌಪ್ಯವಾಗಿ ಮಾತುಕತೆ ನಡೆಸಿದರು.
ಭೇಟಿ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಎಲ್ಲರೂ ಹೊರ ಹೋಗುವಂತೆ ಹೇಳಿದ ಮುಖಂಡರು, ಮನೆಯ ಕೊಠಡಿಯೊಂದಕ್ಕೆ ತೆರಳಿ ಬಾಗಿಲು ಮುಚ್ಚಿ ಉಭಯ ನಾಯಕರು ಕೆಲಕಾಲ ಪ್ರತ್ಯೇಕ ಗೌಪ್ಯ ಮಾತುಕತೆ ನಡೆಸಿದರು.