

ಆರ್.ಕೃಷ್ಣ ಮೈಸೂರು
ಗಂಡು, ಹೆಣ್ಣಿನಂತೆ ತೃತೀಯ ಲಿಂಗಿಗಳಿಗೂ ಸಮಾಜದಲ್ಲಿ ಸಮಾನ ಹಕ್ಕು ಇದ್ದರೂ, ಸೂಕ್ತ ದಾಖಲೆಗಳು ಇಲ್ಲದ ಕಾರಣ ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ವರ್ಷದಿಂದ ವರ್ಷಕ್ಕೆ ಇವರ ಸಂಖ್ಯೆಯಲ್ಲಿ ಏರಿಕೆ ಅಗುತ್ತಿದ್ದು, ಜಿಲ್ಲೆಯಲ್ಲಿ ಈಗ 800 ಜನ ತೃತೀಯ ಲಿಂಗಿಗಳು ಇದ್ದರೂ, ಮತದಾನಕ್ಕೆ ನೋಂದಣಿ ಮಾಡಿಕೊಂಡವರ ಸಂಖ್ಯೆ ಈ ಬಾರಿ 184 ಮಾತ್ರ. ಉಳಿದವರು ನೋಂದಣಿ ಮಾಡಿಕೊಳ್ಳಲು ಮುಂದಾದರೂ ಅವರು ತೃತೀಯ ಲಿಂಗಿಗಳೇ ಅಥವಾ ಅಲ್ಲವೇ ಎನ್ನುವ ಪ್ರಮಾಣಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ.
ಹುಟ್ಟಿದಾಗ ಹೆಣ್ಣು ಅಥವಾ ಗಂಡಾದವರು ದೇಹದಲ್ಲಿ ಉಂಟಾಗುವ ಬದಲಾವಣೆಯಿಂದಾಗಿ ಅತ್ತ ಹೆಣ್ಣು ಅಲ್ಲ, ಇತ್ತ ಗಂಡೂ ಅಲ್ಲ ಎನ್ನುವ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ ತಮ್ಮ ಶಾಲಾ, ಕಾಲೇಜು ದಾಖಲೆ, ಆಧಾರ್ ಕಾರ್ಡ್, ಮತದಾರರ ಕಾರ್ಡ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಹೆಣ್ಣು ಅಥವಾ ಗಂಡು ಎನ್ನುವುದು ನಮೂದಿಸಲಾಗುತ್ತಿದೆ. ಈ ಗುರುತಿನ ಕಾರ್ಡ್‌ಗಳನ್ನು ನೀಡಿ ತೃತೀಯ ಲಿಂಗಿಗಳು ಎಂದು ನಮೂದಿಸಲು ಸಾಧ್ಯವಾಗುತ್ತಿಲ್ಲ.
ತಾವು ತೃತೀಯ ಲಿಂಗಿಗಳು ಎಂದು ಘೋಷಿಸಿಕೊಳ್ಳಲು ಕಾನೂನು ಸೇವಾ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಿ ಅಗತ್ಯ ವೈದ್ಯಕೀಯ ದಾಖಲೆ ಸಲ್ಲಿಸಬೇಕು. ಪ್ರಾಧಿಕಾರದ ಕಾರ್ಯದರ್ಶಿಗಳು ದಾಖಲೆ ಪರಿಶೀಲಿಸಿ ತೃತೀಯ ಲಿಂಗಿ ಎಂದು ಘೋಷಿಸಿದ ಬಳಿ ಅದನ್ನು ಜಿಲ್ಲಾಧಿಕಾರಿಗೆ ರವಾನಿಸಿ ಅಲ್ಲಿ ದಾಖಲೆಗಳ ತಿದ್ದುಪಡಿ, ಲಿಂಗ ಕಾಲಂನಲ್ಲಿ ತೃತೀಯ ಲಿಂಗಿ ಎಂದು ನಮೂದಿಸಬೇಕು. ಆದರೆ ಈ ಪ್ರಕ್ರಿಯೆ ಮಾಡಿಸಬೇಕು ಎಂದು ಸಾಕಷ್ಟು ಜನರಿಗೆ ತಿಳಿವಳಿಕೆ ಇಲ್ಲದಿರುವುದು ಒಂದೆಡೆಯಾದರೆ, ಈ ಪ್ರಕ್ರಿಯೆ ಕೆಲವೊಮ್ಮೆ ನಿಧಾನವಾಗುತ್ತಿದೆ ಎನ್ನುವ ಭಾವನೆಯಿಂದ ಹಲವರು ದಾಖಲೆ ತಿದ್ದುಪಡಿಗೆ ಮುಂದಾಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ತೃತೀಯ ಲಿಂಗಿಗಳಾಗಿದ್ದೂ ದಾಖಲೆ ಇಲ್ಲದೇ ಸಾಕಷ್ಟು ಜನರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಸಾಧ್ಯವಾಗುತ್ತಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೃತೀಯ ಲಿಂಗಿಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಆದರೆ ಅದನ್ನು ಪಡೆದುಕೊಳ್ಳಲು ಹೇಗೆ ಅನೇಕ ಕಾನೂನಾತ್ಮಕ ಮತ್ತು ತಾಂತ್ರೀಕ ಸಮಸ್ಯೆಗಳಿವೆಯೋ ಹಾಗೆಯೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ತೃತೀಯ ಲಿಂಗಿಗಳಿಗೂ ಸಾಕಷ್ಟು ಸಮಸ್ಯೆಗಳಿವೆ.
ಮತದಾನ ಮಾಡಲು ಹಿಂಜರಿಕೆ
2019ರ ಲೋಕಸಭಾ ಚುನಾವಣೆಯಲ್ಲಿ 20,86,413 ಮತದಾರರಲ್ಲಿ 14,68,695 ಮಂದಿ ಮತ ಚಲಾವಣೆ ಮಾಡಿದ್ದಾರೆ. ಇದರಲ್ಲಿ 153 ಒಟ್ಟು ತೃತೀಯ ಲಿಂಗಿಗಳು ನೋಂದಣಿ ಮಾಡಿಕೊಂಡಿದ್ದರೂ 19 ಮಂದಿ ಮಾತ್ರ ಮತದಾನ ಮಾಡಿದ್ದರು. 2023ರ ವಿಧಾನ ಸಭಾ ಚುನಾವಣೆಯಲ್ಲಿ ತೃತೀಯ ಲಿಂಗಿಗಳ ನೋಂದಣಿಯಲ್ಲಿ ಏರಿಕೆ ಕಂಡು 226 ಜನ ನೋಂದಣಿ ಮಾಡಿಸಿಕೊಂಡಿದ್ದರು. ಆದರೆ ಕೇವಲ 49 ತೃತೀಯಲಿಂಗಿಗಳು ಮಾತ್ರ ಮತದಾನ ಮಾಡಿದ್ದರು. ಆ ವರ್ಷ 26,55,984 ಮತದಾರರು ನೋಂದಣಿ ಮಾಡಿಕೊಂಡಿದ್ದು, 19,95,152 ಮಂದಿ ಮತ ಚಲಾಯಿಸಿದ್ದರು.
2024ರ ಲೋಕಸಭಾ ಚುನಾವಣೆಗೆ ಒಟ್ಟು 20,92,222 ಅರ್ಹ ಮತದಾರರಿದ್ದು, ಅವರಲ್ಲಿ 10,26,324 ಪುರುಷ, 10,65,714 ಮಹಿಳಾ ಮತದಾರರು ಇದ್ದಾರೆ. ಆದರೆ ತೃತೀಯ ಲಿಂಗಿಗಳು 184 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಹಿಂದಿನ ಚುನಾವಣೆಗೆ ಹೋಲಿಗೆ ಮಾಡಿದರೆ ನೋಂದಣಿ ಮಾಡಿಸಿಕೊಂಡ ತೃತೀಯ ಲಿಂಗಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ.
ಹಿಂದಿನ ಚುನಾವಣೆಯಲ್ಲಿ 226 ತೃತೀಯ ಲಿಂಗಿಗಳು ನೋಂದಣಿ ಮಾಡಿಸಿಕೊಂಡಿದ್ದರೂ ಈ ಬಾರಿ 42 ನೋಂದಣಿ ಕಡಿಮೆ ಆಗಿದೆ. ಮತದಾನ ಮಾಡಲು ತೆರಳಿದಾಗ ಇತರರು ನೋಡುವ ದೃಷ್ಟಿಕೋನ, ಅವರಲ್ಲಿಯೇ ಇರುವ ಹಿಂಜರಿಕೆ ಮನೋಭಾವದಿಂದ ತೃತೀಯ ಲಿಂಗಿಗಳ ನೋಂದಣಿ ಕಡಿಮೆ ಅಗುತ್ತಿದೆ ಎನ್ನಲಾಗಿದೆ.
ಮೊದಲ ಬಾರಿ ಮತದಾನ
ಗುರುತಿನ ಚೀಟಿಯಲ್ಲಿ ಪುರುಷ ಎಂದು ನಮೂದಿಸಿದ್ದರಿಂದ ಮತದಾನ ಮಾಡಲು ತಾಂತ್ರಿಕ ತೊಡಕು ಉಂಟಾಗಿದ್ದರಿಂದ ಮತದಾನ ಮಾಡಲು ಆಗಿರಲಿಲ್ಲ. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಮತದಾನ ಮಾಡಿದೆ ಎಂದು ತೃತೀಯ ಲಿಂಗಿಗಳ ಸಂಘದ ಮುಖ್ಯಸ್ಥರಾದ ಪ್ರಣತಿ ಪ್ರಕಾಶ್ ಹೇಳಿದರು.
ಆಧಾರ್ ಕಾರ್ಡ್, ವೋಟರ್ ಐಡಿ ಇದ್ದರೂ ಅದರಲ್ಲಿ ಪುರುಷ ಎಂದು ನಮೂದಿಸಿದ್ದರಿಂದ ಸಮಸ್ಯೆ ಉಂಟಾಗಿತ್ತು. ನಮ್ಮನ್ನು ತೃತೀಯ ಲಿಂಗಿಗಳು ಎಂದು ಗುರುತಿಸಿ ಮತದಾರರ ಚೀಟಿ ನೀಡಿದ್ದಾರೆ. ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ತೃತೀಯ ಲಿಂಗಿಗಳು ಇದ್ದರೂ, ಸೂಕ್ತ ದಾಖಲೆ ಇಲ್ಲದೇ ಅವರು ನೋಂದಣಿ ಮಾಡಿಸಲು, ಮತದಾನ ಮಾಡಲು ಆಗುತ್ತಿಲ್ಲ ಎಂದು ಹೇಳಿದರು.
ತೃತೀಯ ಲಿಂಗಿಗಳು ಎಂದು ಜಿಲ್ಲಾಧಿಕಾರಿ ಧೃಡೀಕರಣ ಪತ್ರ ನೀಡಿದರೆ, ಅದನ್ನು ತೆಗೆದುಕೊಂಡು ಮತದಾರರ ಪಟ್ಟಿಯಲ್ಲಿ ನಾವು ಸೇರ್ಪಡೆಯಾಗಬಹುದು. ಈ ಪ್ರಕ್ರಿಯೆಯಲ್ಲಿ ಅನೇಕ ತೃತೀಯ ಲಿಂಗಿಗಳು ಮುಂದಾಗಿದ್ದು, ಈ ಬಾರಿ ಚುನಾವಣೆಯಲ್ಲಿ ತೃತೀಯ ಲಿಂಗಿಗಳ ಮತದಾನ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೊದಲ ಬಾರಿ ಮತದಾನ ಮಾಡುವವರೆಗೂ ನನಗೂ ತುಂಬಾ ಅಂಜಿಕೆ ಇತ್ತು. ಈಗ ಎಲ್ಲರಂತೆ ನಾವೂ ನಮ್ಮ ಹಕ್ಕನ್ನು ಚಲಾಯಿಸಬಹುದು. ನಮ್ಮ ಸಮುದಾಯದ ಎಲ್ಲರೂ ತಪ್ಪದೇ ನೋಂದಣಿ ಮಾಡಿಸಿ ಮತದಾನ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ದೃಢೀಕರಣ ಪತ್ರ ಮಂಜೂರು
ತಮ್ಮ ದೇಹದಲ್ಲಾಗುವ ಬದಲಾವಣೆಯನ್ನು ತಿಳಿಸಿ, ತೃತೀಯ ಲಿಂಗಿಗಳ ದೃಢೀಕರಣ ಪತ್ರ ಪಡೆಯಲು ಅವಕಾಶವಿದೆ. ಈವರೆಗೂ ದೃಢೀಕರಣ ಪತ್ರ ನೀಡುವುದರಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತೃತೀಯ ಲಿಂಗಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸಿ, ನಂತರ ಅನುಮೋದನೆಗೆ ಜಿಲ್ಲಾಧಿಕಾರಿಗೆ ಕಳುಹಿಸುತ್ತಾರೆ. ಈವರೆಗೂ ಕಚೇರಿಗೆ ಬಂದ ಶಿಫಾರಸಾದ ದಾಖಲೆ ಅನ್ವಯ ತೃತೀಯ ಲಿಂಗಿಗಳಿಗೆ ದೃಢೀಕರಣ ಪತ್ರ ಮಂಜೂರು ಮಾಡಲಾಗಿದೆ.
ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ