

ಮಡಿಕೇರಿ: ಅನುವಾದ ಸಾಹಿತ್ಯ ಕಠಿಣವಾದ ಸಾಹಿತ್ಯ ಪ್ರಕಾರವಾಗಿದ್ದು, ಸಾಕಷ್ಟು ಸೂಕ್ಷತೆಯಿಂದ ತರ್ಜುಮೆ ಮಾಡಬೇಕಾದ ಹೊಣೆಗಾರಿಕೆ ಅನುವಾದಕನ ಮೇಲಿರುತ್ತದೆ. ಸಾಕಷ್ಟು ಸಾಹಿತ್ಯಧ್ಯಾಯನದ ಬಳಿಕವೇ ಉತ್ತಮ ಅನುವಾದ ಸಾಧ್ಯವಾಗುತ್ತದೆ ಎಂದು ಮುಂಬೈನ ಬಾಬಾ ಪರಮಾಣು ಸಂಶೋಧನಾ ಕೇಂದ್ರದ ನಿವತ್ತ ವಿಜ್ಞಾನಾಧಿಕಾರಿ ಮುಳಿಯ ರಾಘವಯ್ಯ ಹೇಳಿದರು.
ಸುಂಟಿಕೊಪ್ಪ ಬಳಿಯ ಗುಂಡುಗುಟ್ಟಿ ಶ್ರೀ ರಾಮಮಂದಿರ ಸಭಾಂಗಣದಲ್ಲಿ ಆಯೋಜಿತ ಮಂಜನಾಥಯ್ಯ ಅವರ ೧೨೧ನೇ ಜನ್ಮಜಯಂತಿ ಸಮಾರಂಭದಲ್ಲಿ ಗುಂಡುಗುಟ್ಟಿ ಮಂಜನಾಥಯ್ಯ ಅವರ ಜೀವನ ಚರಿತ್ರೆಯ ಕೊಡಗಿನ ಕಲ್ಪತರು ಹೆಸರಿನ ಕನ್ನಡ ಮತ್ತು ಇಂಗ್ಲೀಷ್ ಕೃತಿಗಳನ್ನು ಲೋಕಾರ್ಪಣೆ ಮಾಡಿ ರಾಘವಯ್ಯ ಮಾತನಾಡಿದರು.
ಇಂದಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಗೂಗಲ್ ಅಥವಾ ಎಐ ನೆರವಿನಿಂದ ತರ್ಜುಮೆ ಸುಲಭಸಾಧ್ಯ ಎಂಬ ಭಾವನೆ ಹಲವರಲ್ಲಿದೆ. ಆದರೆ, ಖಂಡಿತವಾಗಿಯೂ ಈ ತಂತ್ರಜ್ಞಾನ ಬಳಸಿ ಮಾಡುವ ತರ್ಜುಮೆ ನೈಜವಾದ ಅನುವಾದಕ್ಕೆ ನ್ಯಾಯ ನೀಡಲಾರದು. ಈ ರೀತಿಯ ತರ್ಜುಮೆಯ ಭಾಷೆ ಸ್ಪಷ್ಟವಾದ ಅನುವಾದ ಆಗಲಾರದು ಎಂದೂ ರಾಘವಯ್ಯ ಹೇಳಿದರು.
ಭಾರತೀಯ ಭಾಷೆಗಳು ಸಾಕಷ್ಟು ವರ್ಷಗಳ ಇತಿಹಾಸ ಹೊಂದಿವೆ. ಪ್ರತೀ ಭಾಷೆಯೂ ತನ್ನದೇ ಆದ ಮಹತ್ವದ ಪದಗಳನ್ನು ಒಳಗೊಂಡಿರುತ್ತದೆ. ಹೀಗಿರುವಾಗ ಇಂಥ ಭಾಷಾ ಪದಗಳನ್ನು ಗೂಗಲ್, ಎಐ ತಂತ್ರಜ್ಞಾನದಿಂದ ತರ್ಜುಮೆ ಮಾಡಿದರೆ ಖಂಡಿತವಾಗಿಯೂ ಆಯಾ ಭಾಷೆಗೆ ವ್ಯಾಯ ದೊರಕಿದಂತಾಗದು ಎಂದೂ ಮುಳಿಯ ರಾಘವಯ್ಯ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗುಂಡುಗುಟ್ಟಿ ಮಂಜನಾಥಯ್ಯ ಅವರ ಕುರಿತು ಮಾತನಾಡಿದ ಹಿರಿಯ ಸಾಹಿತಿ ಸಿ.ಪಿ.ಬೆಳ್ಳಿಯಪ್ಪ, ಕೊಡಗಿನಲ್ಲಿ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದ ಮಂಜನಾಥಯ್ಯನವರು, ಗಾಂಧೀಜಿಯವರನ್ನೇ ತನ್ನ ಗುಂಡುಗುಟ್ಟಿ ಬಂಗಲೆಗೆ ಕರೆತಂದಿದ್ದರು. ಗುಂಡುಗುಟ್ಟಿಯಲ್ಲಿಯೇ ಇದ್ದ ಕಥೆಗಾರ್ತಿ ಕೊಡಗಿನ ಗೌರಮ್ಮ ಆ ಸಂದರ್ಭ ಗಾಂಧೀಜಿಯವರ ಮಾತಿನಿಂದ ಪ್ರೇರಿತರಾಗಿ ತನ್ನೆಲ್ಲಾ ಚಿನ್ನಾಭರಣಗಳನ್ನು ಸ್ವಾತಂತ್ರ್ಯ ಚಳವಳಿಯ ಹೋರಾಟಕ್ಕೆಂದು ಗಾಂಧೀಜಿಗೆ ನೀಡಿದ್ದರು. ಡಿವಿಜಿ, ಬೇಂದ್ರೆ, ಶಿವರಾಮಕಾರಂತ, ಪಂಜೆ ಮಂಗೇಶರಾಯ ಸೇರಿದಂತೆ ಕೊಡಗಿಗೆ ಬರುತ್ತಿದ್ದ ಅನೇಕ ಸಾಹಿತ್ಯ ದಿಗ್ಗಜರಿಗೆ ಗುಂಡುಗುಟ್ಟಿ ಮಂಜನಾಥಯ್ಯ ಸಾಹಿತ್ಯ ರಚನೆಗೆ ಪ್ರೇರಣೆಯಾಗಿದ್ದರು ಎಂದು ಸ್ಮರಿಸಿದರು.
ಪತ್ರಕರ್ತ ಜಿ.ಚಿದ್ವಿಲಾಸ್ ಮಾತನಾಡಿ, ಸುಂದರ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅನೇಕ ಮಹನೀಯರು ಮಹತ್ವದ ಕೊಡುಗೆ ನೀಡಿದ್ದಾರೆ. ಕೊಡಗಿನ ಪಾಲಿಗೆ ಇಂಥ ಮಹನೀಯರಲ್ಲಿ ಗುಂಡುಗುಟ್ಟಿ ಮಂಜನಾಥಯ್ಯ ಕೂಡ ಪ್ರಮುಖರು ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ, ನಿವೃತ್ತ ಉಪನ್ಯಾಸಕ ಕೆ.ಎಸ್.ಭಟ್, ಚೆಟ್ಟಳ್ಳಿಯ ಕಾಫಿ ಬೆಳೆಗಾರ ಎಚ್.ಎಸ್.ತಿಮ್ಮಪ್ಪಯ್ಯ, ಪುಸ್ತಕಗಳನ್ನು ಪ್ರಕಾಶನಗೊಳಿಸಿದ ಮಡಿಕೇರಿಯ ವಾರ್ತಾ ಕಮ್ಯೂನಿಕೇಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್.ಟಿ.ಅನಿಲ್ ಮಾತನಾಡಿದರು.
ಇದೇ ಸಂದರ್ಭ ಕೃತಿಗಳನ್ನು ಮುದ್ರಿಸಿದ ಕಾನಬೈಲು ತೋಟಮಾಲೀಕ ಗುಂಡುಗುಟ್ಟಿ ರಾಜೇಂದ್ರಕುಮಾರ್ ಅವರು ಮುಳಿಯ ರಾಘವಯ್ಯ ಅವರನ್ನು ಸನ್ಮಾನಿಸಿದರು. ಸ್ವಾತಿ ಮಂದಣ್ಣ ಸ್ವಾಗತಿಸಿ, ವಂದಿಸಿದ ಕಾರ್ಯಕ್ರಮದಲ್ಲಿ ಸಾಧನಾ ರಾಜೇಂದ್ರ, ಮಂಜನಾಥಯ್ಯ ಅವರ ಮೊಮ್ಮಕ್ಕಳಾದ ಶಾಂತಳ, ಮರಿಮಕ್ಕಳಾದ ಮನುಗೌತಮ್, ಮುಕುಲ್ ಮಹೇಂದ್ರ, ಅಕ್ಷಯ್ ಸೇರಿದಂತೆ ಜಿಲ್ಲೆಯಾದ್ಯಂತಲಿನ ಅನೇಕ ಗಣ್ಯರು ಹಾಜರಿದ್ದರು. ಗುಂಡುಗುಟ್ಟಿ ಮಂಜನಾಥಯ್ಯ ಅವರ ೧೨೧ನೇ ಜನ್ಮಜಯಂತಿ ಸಂದರ್ಭ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಲಾಯಿತು.