ಪಾಲಿಕೆ ವಾರ್ಡ್‌ಗಳ ಕರಡು ಅಧಿಸೂಚನೆಯಲ್ಲಿ ಅನುವಾದದ ಎಡವಟ್ಟು

gba board
Published on

ಆರ್​​.ತುಳಸಿಕುಮಾರ್​​

ಬೆಂಗಳೂರು: ಯಲಹಂಕ ಉಪಗ್ರಹ ಪಟ್ಟಣ, ಚೆಲ್ಲಾಕೆರೆ, ದೊಡ್ಡ ಕಣ್ಣಲ್ಲಿ, ಕಸ್ತೂರ್ಭಾ, ಅಡುಗೋಡಿ . . . ಇವು ಯಾವುದೋ ಪ್ರದೇಶಗಳ ಹೆಸರಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಪಂಚ ಪಾಲಿಕೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ರಚಿಸಿರುವ ವಾರ್ಡ್‌ಗಳ ಹೆಸರು. ಇತ್ತೀಚಿಗೆ ಸರ್ಕಾರ ಪ್ರಕಟಿಸಿರುವ ಕರಡು ಅಧಿಸೂಚನೆಯಲ್ಲಿ ವಾರ್ಡ್‌ಗಳ ಹೆಸರು, ಪ್ರದೇಶಗಳ ವಿವರಣೆಯಲ್ಲಿ ಕನ್ನಡದ ಕಗ್ಗೂಲೆಯಾಗಿದೆ. ತಪ್ಪು ತಪ್ಪಾಗಿ ಕನ್ನಡ ಪದಗಳನ್ನು ಬಳಸಿದ್ದು ಈ ಬಗ್ಗೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರಡು ಅಧಿಸೂಚನೆಯನ್ನು ಇಂಗ್ಲಿಷ್‌ನಲ್ಲಿ ಹೊರಡಿಸಿ ಅದನ್ನು ಕನ್ನಡಕ್ಕೆ ಭಾಷಾಂತರ ಮಾಡುವಾಗ ಇಂತಹ ಎಡವಟ್ಟು ಸೃಷ್ಟಿಯಾಗಿದೆ. ಐದೂ ಪಾಲಿಕೆಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಹಲವಾರು ತಪ್ಪುಗಳು ನುಸುಳಿವೆ. ಆಯಾ ಕಾಪೋರೇಷನ್‌ಗಳ ವ್ಯಾಪ್ತಿಯಲ್ಲಿ ಹೊಸದಾಗಿ ವಾರ್ಡ್‌ಗಳು ರಚನೆಗೊಂಡಿವೆ. ಇವುಗಳು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಾರ್ಡ್‌ಗಳ ಹೆಸರು ಸರಿಯಾಗಿ ನಮೂದಿಸದೆ ತಪ್ಪು ತಪ್ಪಾಗಿ ಮುದ್ರಿಪಿ ಹಾಗೆಯೇ ಅಧಿಸೂಚನೆ ಪ್ರಕಟಿಸಿದ್ದಾರೆ.

ಭಾಷಾಂತರದಿಂದ ತಪ್ಪು ಪದಗಳ ನಮೂದು:

ಕರಡು ಅಧಿಸೂಚನೆಯನ್ನು ಮೊದಲು ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿ ಆನಂತರ ಯಥಾವತ್ತಾಗಿ ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ಇದರಿಂದ ಕನ್ನಡದ ಹೆಸರುಗಳಲ್ಲಿ ಹಲವು ತಪ್ಪುಗಳು ನುಸುಳಲು ಕಾರಣವಾಗಿದೆ. ವಾರ್ಡ್‌ಗಳ ಹೆಸರುಗಳಲ್ಲದೆ ಆಯಾ ಬಡಾವಣೆ, ಪ್ರದೇಶ, ರಸ್ತೆ ಇತ್ಯಾದಿ ಗಡಿ ಭಾಗಗಳನ್ನು ಇಂಗ್ಲಿಷ್‌ನಿಂದ ಯಥಾವತ್ತಾಗಿ ಕನ್ನಡಕ್ಕೆ ತರ್ಜುಮೆ ಮಾಡಿರುವುದರಿಂದಲೇ ಇಂತಹ ಎಡವಟ್ಟು ಸೃಷ್ಟಿಯಾಗಿದೆ. ಇದಕ್ಕೆ ಅಧಿಕಾರಿಗಳೇ ಹೊಣೆಯಾಗಿದ್ದು, ಕನಿಷ್ಠ ಪಕ್ಷ ಕನ್ನಡದ ಜ್ಞಾನವಿರುವ ಸಿಬ್ಬಂದಿಗಳಿಂದ ಪರಿಶೀಲಿಸುವ ಕೆಲಸ ಆಗಿಲ್ಲ ಎಂಬುದು ಅಸಂಖ್ಯ ತಪ್ಪುಗಳು ನಮೂದಾಗಲು ಕಾರಣವಾಗಿದೆ.

ಉಪಗ್ರಹವಾದ ಉಪನಗರ:

ಉತ್ತರ ಪಾಲಿಕೆ ವ್ಯಾಪ್ತಿಯ ಯಲಹಂಕ ಉಪನಗರ ವಾರ್ಡ್‌ ‘ಯಲಹಂಕ ಉಪಗ್ರಹ ಪಟ್ಟಣ’ವಾಗಿ ನಮೂದಿಸಲಾಗಿದೆ. ಇಂಗ್ಲಿಷ್‌ನಲ್ಲಿ ‘ಸ್ಯಾಟಲೈಟ್ ಟೌನ್’ ಪದವನ್ನು ಕನ್ನಡಕ್ಕೆ ಭಾಷಾಂತರ ಮಾಡುವಾಗ ಉಪಗ್ರಹ ಪಟ್ಟಣವಾಗಿದೆ. ಈ ಭಾರಿ ಪ್ರಮಾದ ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಅಚ್ಚರಿ ಮೂಡಿಸಿದೆ. ವಾರ್ಡ್‌ಗಳ ರಚನೆ ಕಾರ್ಯವನ್ನು ಖಾಸಗಿ ಏಜೆನ್ಸಿ ಮೂಲಕ ಕೈಗೊಳ್ಳಲಾಗಿತ್ತು ಎಂಬುದಾಗಿ ‘ವಿಜಯವಾಣಿ’ ಈ ಹಿಂದೆಯೇ ವರದಿ ಮಾಡಿತ್ತು. ಅದೀಗ ನಿಜವಾಗಿದ್ದು, ಕನ್ನಡದಲ್ಲಿ ಹೊರಡಿಸಿರುವ ಕರಡು ಅಧಿಸೂಚನೆಯಲ್ಲೇ ಹತ್ತಾರು ತಪ್ಪುಗಳು ಆಗಿರುವುದು ಅಕ್ಷಮ್ಯ ಅಪರಾಧ ಎಂಬುದಾಗಿ ಕೆಲ ಮಾಜಿ ಕಾರ್ಪೊರೇಟರ್‌ಗಳು ಸರ್ಕಾರದ ನಡೆಗೆ ಆಕ್ಷೇಪಿಸಿದ್ದಾರೆ.

ಇದೇ ರೀತಿ ಪೂರ್ವ ಪಾಲಿಕೆಯ ಚಳ್ಳಕೆರೆ ವಾರ್ಡ್ ‘ಚೆಲ್ಲಾಕೆರೆ’, ದೊಡ್ಡ ಕನ್ನಳ್ಳಿ ವಾರ್ಡ್ ‘ದೊಡ್ಡ ಕಣ್ಣಲ್ಲಿ’ ಎಂದು ತಪ್ಪಾಗಿ ನಮೂದಾಗಿದೆ. ದಕ್ಷಿಣ ಪಾಲಿಕೆ ವ್ಯಾಪ್ತಿಯ ಆಡುಗೋಡಿ ವಾರ್ಡ್ ‘ಅಡುಗೋಡಿ’ ಎಂಬುದಾಗಿ ಅಪಭ್ರಂಶವಾಗಿದೆ. ದೊಡ್ಡ ಬಿದರಕಲ್ಲು ವಾರ್ಡ್ ಹೆಸರು ‘ದೊಡ್ಡ ಬಿಡರಕಲ್ಲು’ ಎಂದೂ, ಗೊರಗುಂಟೆಪಾಳ್ಯ ವಾರ್ಡ್ ‘ಗೋರಗುಂಟೆಪಾಳ್ಯ’ ಹೆಸರಿನಲ್ಲಿ ತಪ್ಪುಗಳಾಗಿವೆ. ಈ ರೀತಿ 15ಕ್ಕೂ ಹೆಚ್ಚು ವಾರ್ಡ್‌ಗಳ ಹೆಸರು ತಪ್ಪಾಗಿ ನಮೂದಿಸಲಾಗಿದೆ. ಇವುಗಳನ್ನು ಕನ್ನಡದಲ್ಲಿ ಸರಿಯಾಗಿ ಬಳಸುವ ರೀತಿ ಮುದ್ರಿಸಿ ಜನರಿಗೆ ತಿಳಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ವಾರ್ಡ್‌ಗಳ ಹೆಸರು ತಪ್ಪಾಗಿ ನಮೂದಿಸಿರುವುದು:

ತಪ್ಪು ಬಳಕೆ ಸರಿಯಾದ ಹೆಸರು

ಯಲಹಂಕ ಉಪಗ್ರಹ ಪಟ್ಟಣ ಯಲಹಂಕ ಉಪನಗರ

ಚೆಲ್ಲಾಕೆರೆ ಚಳ್ಳಕೆರೆ

ದೊಡ್ಡ ಕಣ್ಣಲ್ಲಿ ದೊಡ್ಡ ಕನ್ನಳ್ಳಿ

ಗಣೇಶ್ ಮಂದಿರಾ ವಾರ್ಡ್ ಗಣೇಶಮಂದಿರ ವಾರ್ಡ್

ಕಸ್ತೂರ್ಭಾ ಕಸ್ತೂರಿಬಾಯಿ ನಗರ

ಶಾಕಂಬರಿನಗರ ಶಾಕಾಂಬರಿನಗರ

ಅಡುಗೋಡಿ ಆಡುಗೋಡಿ

ಶಂಕರ್ ಮಠ ಶಂಕರಮಠ

ಇಬ್ಲೂರ್ ಇಬ್ಬಲೂರು

ಗುಂಜೂರ್ ಗುಂಜೂರು

ಪ್ರದೇಶಗಳ ಹೆಸರಿನಲ್ಲೂ ತಪ್ಪು ಪ್ರಯೋಗ:

ವಾರ್ಡ್‌ಗಳ ಹೆಸರುಗಳನ್ನು ತಪ್ಪಾಗಿ ನಮೂದಿಸಿರುವುದಲ್ಲದೆ ಬಡಾವಣೆ, ಪ್ರದೇಶ ಹಾಗೂ ಗಡಿ ಭಾಗದ ಹೆಸರುಗಳನ್ನು ತಪ್ಪು ತಪ್ಪಾಗಿ ನಮೂದಿಸಲಾಗಿದೆ. ಶ್ರೀಗಂಧಕಾವಲ್ ಸ್ಥಳವು ‘ಶ್ರೀಗಂಧಕವಲು’, ಬಳೇಪೇಟೆ ರಸ್ತೆ ‘ಬಾಳೆಪೇಟೆ ರಸ್ತೆ’, ಗಾಲ್ಫ್ ಕೋರ್ಸ್ ರಸ್ತೆಯು ‘ಗಾಫ್​​ ಕೋರ್ಸ್ ರೋಡ್’, ನೋಬೊ ನಗರದ ಹೆಸರು ನೋಬೇ ನಗರ್ ಎಂಬುದಾಗಿ ತಪ್ಪು ಪದಪ್ರಯೋಗವಾಗಿದೆ.

ಜಿಬಿಎ ವ್ಯಾಪ್ತಿಯಲ್ಲಿ ರಚಿಸಿರುವ ಪಾಲಿಕೆಗಳ ವಾರ್ಡ್‌ಗಳು ಅವೈಜ್ಞಾನಿಕವಾಗಿವೆ. ಆಡಳಿತ ಪಕ್ಷವು ಚುನಾವಣೆಯಲ್ಲಿ ಗೆಲ್ಲಲು ಈ ರೀತಿ ಮಾಡಿದಂತಿದೆ. ವಾರ್ಡ್‌ಗಳ ಹೆಸರು ಸರಿಯಾಗಿ ಕನ್ನಡದಲ್ಲಿ ನಮೂದಿಸಲು ಆಗದ ಸರ್ಕಾರ ಆಡಳಿತ ಭಾಷೆಗೆ ಯಾವ ರೀತಿಯ ಗೌರವ ನೀಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ತಪ್ಪು ಎಸೆಗಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು.

- ಅಶ್ವತ್ಥನಾರಾಯಣಗೌಡ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net