

ಕಾರವಾರ: ರಾಜ್ಯದಲ್ಲಿರುವ ಲಿಂಗತ್ವ ಅಲ್ಪ ಸಂಖ್ಯಾತರ ಸಾಮಾಜಿಕ, ಆರ್ಥಿಕ, ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಅವರಿಗೆ ಸಾಮಾಜಿಕ, ಆರ್ಥಿಕ ಮತ್ತು ಮತ್ತು ಶೈಕ್ಷಣಿಕ ಸೌಲಭ್ಯ, ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಹಾಗಾಗಿ ರಾಜ್ಯಾದ್ಯಂತ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮೊಬೈಲ್ ಆ್ಯಪ್ ಮೂಲಕ ಲಿಂಗತ್ವ ಅಲ್ಪಸಂಖ್ಯಾತರನ್ನು ಬಳಸಿಕೊಂಡೇ ಟ್ರಾನ್ಸ್ ಜೆಂಡರ್ಸ್ ಸಮೀಕ್ಷೆ ಕೈಗೊಳ್ಳಲಾಗುತ್ತದೆ. ಸಮೀಕ್ಷೆ ಮಾಡುವವರಿಗೆ ಈಗಾಗಲೇ ಅಗತ್ಯವಿರುವ ತರಬೇತಿಯನ್ನು ನೀಡಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗಳಲ್ಲಿ ಸಂಬಂಧಪಟ್ಟವರು ಭಾಗವಹಿಸಲು ಹೆಚ್ಚಿನ ಪ್ರಚಾರಕ್ಕಾಗಿ ಮಾಹಿತಿ, ಶಿಕ್ಷಣ, ಹಾಗೂ ಸಂವಹನಕ್ಕೆ ಸಂಬಂಧಿಸಿದಂತೆ ಪೊಸ್ಟರ್‌ನ್ನು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಇತ್ತೀಚೆಗೆ ಬಿಡುಗಡೆ ಮಾಡಿದರು.
ಲಿಂಗತ್ವ ಅಲ್ಪ ಸಂಖ್ಯಾತರ ಸಮೀಕ್ಷೆಗಾಗಿ ಪ್ರತ್ಯೇಕ ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಈ ಸಹಾಯವಾಣಿ ಸಂಖ್ಯೆ 18005992025 ಗೆ ಕರೆ ಮಾಡಿ ತಮ್ಮ ಮಾಹಿತಿಯ ವಿವರಗಳನ್ನು ಹಂಚಿಕೊಳ್ಳಬಹುದಾಗಿದೆ. ಲಿಂಗತ್ವ ಅಲ್ಪ ಸಂಖ್ಯಾತರ ಮೂಲ ಹಂತದ ಸಮೀಕ್ಷಾ ಕಾರ್ಯನಿರ್ವಹಣೆಗಾಗಿ ಜಿಲ್ಲಾಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಮಿತಿಗಳನ್ನು ಜಿಲ್ಲಾಽಕಾರಿಗಳ ನೇತೃತ್ವದಲ್ಲಿ ರಚಿಸಲಾಗಿದೆ. ಅದರಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರು ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳಿವೆ. ಜಿಲ್ಲೆಯಲ್ಲಿ ಸೆಪ್ಟೆಂಬರ್ 15 ರಿಂದ ಈ ಸಮೀಕ್ಷೆಯನ್ನು ಪ್ರಾರಂಭಿಸಿ, 45 ಕಚೇರಿ ಕೆಲಸದ ದಿನಗಳಲ್ಲಿ ಮುಕ್ತಾಯಗೊಳಿಸಲಾಗುವುದು: ಎಂದು ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.