

ಮೈಸೂರು: ಸಮಾಜದ ನಿಂದನೆ, ಮೂದಲಿಕೆಯ ನೋವಿನ ನಡುವೆ ತೃತೀಯ ಲಿಂಗಿಗಳು ನರ್ತಿಸಿ, ಆಟೋದಲ್ಲಿ ಸಂಭ್ರಮಿಸಿ ತಮ್ಮ ಬದುಕಿನ ಕಥೆಗಳನ್ನು ಅನಾವರಣಗೊಳಿಸುವ ಮೂಲಕ ಮನಸು ಹಗುರ ಮಾಡಿಕೊಂಡರು.
ಮೈಸೂರು ಕ್ವೀರ್ ಕಾರ್ನಿವಲ್‌ನಿಂದ ನಗರದ ಹೆರಿಟೇಜ್ ಹೌಸ್‌ನಲ್ಲಿ ಪಾಪಿನ್ಸ್ ಕ್ಲಬ್, ಸ್ಪಂದನ, ಕ್ವೀರ್ ಅವಾಮ್ ಸಂಸ್ಥೆಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದೆಡೆ ಕಲೆತ ತೃತೀಯ ಲಿಂಗಿಗಳು, ನೋವು ಮರೆತು ಸಂತಸದಿಂದ ಇಡೀ ದಿನದೂಡಿದರು.
ನಮ್ಮ ಅಸ್ತಿತ್ವ ಇರುವುದು ಖುಷಿ ಹರಡಲು, ಸಮಾನರಾಗಿ ಬದುಕಲು ಎಂದು ನಮ್ಮ ಮನದಾಳವನ್ನು ಬಿಚ್ಚಿಟ್ಟ ತೃತೀಯ ಲಿಂಗಿಗಳು, ಹಾಡು, ಕುಣಿತ, ಬದುಕಿನ ಕಥೆಗಳ ಮೂಲಕ ಮನಸು ಹಗುರ ಮಾಡಿಕೊಂಡರು.
ಕಾರ್ಯಕ್ರಮದ ಆರಂಭದಲ್ಲಿ ಟ್ರಾನ್ಸ್ ಸಮುದಾಯದ ಬಾವುಟವನ್ನು ಅಪ್ಪಿ ಹಿಡಿದು, ಬ್ಯಾಂಡ್‌ಸೆಟ್‌ನ ಶಬ್ದಕ್ಕೆ ಸಂತಸದಿಂದ ಹೆಜ್ಜೆ ಹಾಕಿದರು. ಹೆರಿಟೇಜ್ ಹೌಸ್ ಆವರಣ ತಲುಪುತ್ತಿದ್ದಂತೆಯೇ ಪರಸ್ವರ ಅಪ್ಪಿ ಶುಭಾಶಯ ವಿನಿಮಯ ಮಾಡಿಕೊಂಡರು.
ಬಳಿಕ ನಡೆದ ಸಂವಾದದಲ್ಲಿ ತಮ್ಮ ಮನದಾಳವನ್ನು ಬಿಚ್ಚಿಟ್ಟ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಅನಿರುದ್ಧ್, ಹುಟ್ಟುತ್ತ ಯಾರಿಗೂ ಲಿಂಗ ಎನ್ನುವುದು ಇರುವುದಿಲ್ಲ. ಬೆಳೆದಂತೆ ನೀನು ಗಂಡು ಅಥವಾ ಹೆಣ್ಣು ಎಂದು ಸಮಾಜ ಲಿಂಗತ್ವವನ್ನು ಹೇಳುತ್ತದೆ. ಇಂಥ ಹೇರಿಕೆಗಳೇ ತೃತೀಯ ಲಿಂಗಿಗಳು ಎದುರಿಸುತ್ತಿರುವ ಗೊಂದಲಗಳ ಮೂಲ ಎಂದರು.
ನಮ್ಮ ಸಮುದಾಯ ಮಾತ್ರ ಸಮಸ್ಯೆಯಲ್ಲಿಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲ್ವರ್ಗ ಎನಿಸಿಕೊಂಡವರೂ ಮತ್ತು ಆರ್ಥಿಕವಾಗಿ ಬಲಾಢ್ಯರು ಯಾವಾಗಲೂ ಸರ್ಕಾರದಿಂದ ಉನ್ನತ ಸ್ಥಾನವನ್ನೇ ಪಡೆಯುತ್ತಾರೆ. ಉಳಿದವರೆಲ್ಲರೂ ನಮ್ಮಂತೆಯೇ ಸಮಸ್ಯೆಯಲ್ಲಿದ್ದಾರೆ ಎಂದು ಹೇಳಿದರು.
ಹಾಗಾಗಿ ನಮ್ಮ ಹಕ್ಕು, ಮಾನವ ಹಕ್ಕು ಎರಡೂ ಒಂದೇ ಆಗಿದೆ. ಈ ಹಕ್ಕುಗಳನ್ನು ಪ್ರತಿಪಾದಿಸಿ, ನ್ಯಾಯಯುತ ಹಾಗೂ ಗೌರವಯುತ ಜೀವನ ನಡೆಸಲು ಎಲ್ಲರಿಗೂ ಅವಕಾಶ ನೀಡಬೇಕು ಎನ್ನುವುದು ನಮ್ಮ ನಿಲುವಾಗಿದೆ ಎಂದು ಪ್ರತಿಪಾದಿಸಿದರು.
ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆಯೇ ಎಲ್ಲ ಸಮಸ್ಯೆಗೂ ಕಾರಣವಾಗಿದ್ದು, ಲಿಂಗತ್ವ ಅಲ್ಪಸಂಖ್ಯಾತರೂ ಈ ವ್ಯವಸ್ಥೆಯಿಂದ ಹೊರತಾಗಿಲ್ಲ. ನಮ್ಮ ಸಮುದಾಯದ ಹಕ್ಕಿನ ಹೋರಾಟವನ್ನು 2ನೇ ಸ್ಥಾನದಲ್ಲಿಟ್ಟರೂ ಪರವಾಗಿಲ್ಲ, ಸ್ಥಳೀಯ ಸಂಘಟನೆಯೊಂದಿಗೆ ಸೇರಿ ಜಾತಿ ವ್ಯವಸ್ಥೆ ನಿರ್ಮೂಲನೆಯಲ್ಲಿ ತೊಡಗಬೇಕು. ಅಂಬೇಡ್ಕರ್, ಫುಲೆ, ಪೆರಿಯಾರ್ ಅವರ ಮಾರ್ಗವನ್ನು ಒಳಗೊಳ್ಳಬೇಕು ಎಂದರು.
ನಮ್ಮ ಸಮುದಾಯಕ್ಕೆ ನಗರ ಪ್ರದೇಶಗಳಲ್ಲಿ ಸ್ವಲ್ಪವಾದರೂ ಧ್ವನಿ ಸಿಕ್ಕಿದೆ. ಆದರೆ ಹಳ್ಳಿಗಳಲ್ಲಿ, ಅದರಲ್ಲೂ ದಲಿತರಾಗಿರುವ ತೃತೀಯ ಲಿಂಗಿಗಳಿಗೆ ಉಸಿರೇ ಇಲ್ಲವಾಗಿದೆ. ಹೀಗಾಗಿ ನಮ್ಮ ಹಕ್ಕನ್ನು ಸ್ಥಾಪಿಸಲು, ನಮ್ಮನ್ನು ನಾವು ಗುರುತಿಸಿಕೊಂಡಿರುವ ಹೆಸರಿನಿಂದ ಕರೆಯಬೇಕು ಎನ್ನವುದು ನಮ್ಮ ಹೋರಾಟವಾಗಿದೆ ಎಂದು ಹೇಳಿದರು.
ಸ್ಪಂದನ ಸಂಸ್ಥೆ ರಾಜ್ಯ ಸಂಚಾಲಕಿ ಪ್ರಣತಿ ಪ್ರಕಾಶ್ ಮಾತನಾಡಿ, ಮೂರು ದಶಕಗಳ ಹಿಂದೆ ನಮ್ಮ ಪರಿಸ್ಥಿತಿ ಬಹಳ ಕಠಿಣವಾಗಿತ್ತು. ನಪುಂಸಕ, ಷಂಡ, ಚಕ್ಕ ಇನ್ನಿತರ ಹೆಸರುಗಳಿಂದ ಕರೆದು ನೋಯಿಸುತ್ತಿದ್ದರು. ಗೌರವಯುತವಾಗಿ ಕರೆಯಿರಿ ಎನ್ನುವುದೇ ನಮ್ಮ ಹೋರಾಟವಾಗಿತ್ತು. ಅದಕ್ಕೆ ಸಂಘಟನೆಯಿಂದ ಬಲ ಬಂದಂತಾಗಿದೆ ಎಂದು ಹೇಳಿದರು.
ಸೆಕ್ಸ್ ವರ್ಕರ್, ತೃತೀಯ ಲಿಂಗಿಗಳು, ಲೈಂಗಿಕ ಅಲ್ಪಸಂಖ್ಯಾತರು ಎನ್ನುವ ಪದಗಳು ಚಾಲ್ತಿಗೆ ಬಂದವು. ನನ್ನ ಸಮುದಾಯ ಎಲ್ಲರಂತೆ ಉನ್ನತ ಸ್ಥಾನಕ್ಕೆ ಏರಬೇಕು. ಇತರರು ಪಡೆಯುತ್ತಿರುವ ಎಲ್ಲ ಸೌಲಭ್ಯ, ಅವಕಾಶಗಳು ದೊರೆಯಬೇಕು ಎಂಬುದೇ ನಮ್ಮ ಗುರಿಯಾಗಿದೆ. ಅದಕ್ಕೆ ಈಗ ಕೊಂಚ ನಿಧಾನವಾಗಿ ಬದಲಾವಣೆ ಆಗುತ್ತಿದ್ದು, ನಮ್ಮ ಸಮುದಾಯದವರು ವಿದ್ಯಾವಂತರು, ಪದವೀಧರರು, ಸರ್ಕಾರಿ ಉದ್ಯೋಗಿಗಳಾಗಿಯೂ ಕಾಣಿಸಿಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ನಾವು ಗೌರವಯುತ ಜೀವನವನ್ನು ಮಾತ್ರ ಬಯಸುತ್ತೇವೆ ಎಂದರು.
ಪಾಪಿನ್ಸ್ ಕ್ಲಬ್ ಸ್ಥಾಪಕ ಮೊಹಮ್ಮದ್ ಶೇಝಾನ್, ಸ್ಪಂದನ ವ್ಯವಸ್ಥಾಪಕ ನಿರ್ದೇಶಕಿ ಅಂಜಲಿ ಡಿ.ಗುಪ್ತಾ, ಫಾರ್ಮ ಉದ್ಯೋಗಿ, ಕಾರ್ಯಕರ್ತೆ ಲಕ್ಷ್ಮೀ ಉಪಾಧ್ಯಾಯ, ಸಮುದಾಯದ ಕಾರ್ಯಕರ್ತ ಆಸಿಫಾ ಜಾನ್ ಸಂವಾದದಲ್ಲಿ ಭಾಗವಹಿಸಿದರು. ಆಶಾಕಿರಣ ಆಸ್ಪತ್ರೆ ಡಾ.ಶ್ರೀರಾಮ, ನಿಶಾ, ಮಧುರಾ ಇತರರು ಇದ್ದರು.