ಟ್ರಾನ್ಸ್‌ಫಾರ್ಮಾರ್ ವಿಚಾರ, ದೊಡ್ಡೇರಿ ಗ್ರಾಪಂ ಮಾಜಿ ಅಧ್ಯಕ್ಷನ ಹತ್ಯೆ

dodderi grapam ex president shantakumar
ಕೊಲೆಯಾದ ದೊಡ್ಡೇರಿ ಗ್ರಾಪಂ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ ಶಾಂತಕುಮಾರ್
Published on

ಶಿವಮೊಗ್ಗ: ಭದ್ರಾವತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮಾರ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ರಾತ್ರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡನ ಹತ್ಯೆ ಮಾಡಲಾಗಿದೆ. ಕೊಲೆ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಸಂಬಂಧಿಕರು ಎರಡು ಬೈಕ್ ಜಖಂಗೊಳಿಸಿ, ಆರೋಪಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಕೊಲೆ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.

ದೊಡ್ಡೇರಿ ಗ್ರಾಪಂ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ ಶಾಂತಕುಮಾರ್(42) ಕೊಲೆಯಾದ ದುದೈರ್ವಿ. ಅದೇ ಗ್ರಾಮದ ಲೇಪಾಕ್ಷಿ, ಆತನ ಸಹೋದರ ಅತೀಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ದೊಡ್ಡೇರಿ ಗ್ರಾಮದ ಶಾಂತಕುಮಾರ್ ಮೃತಪಟ್ಟ ಬೆನ್ನಲ್ಲೇ ಸಂಬಂಧಿಕರು ಆರೋಪಿ ಲೇಪಾಕ್ಷಿ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಮನೆಗೆ ಕಲ್ಲು ತೂರಾಟ ನಡೆಸಿ, ಎರಡು ಬೈಕ್‌ಗಳನ್ನೂ ಜಖಂಗೊಳಿಸಿ ಮನೆಗೆ ಬೆಂಕಿ ಹಚ್ಚಿದ್ದು ಸ್ಥಳೀಯರು ನಂದಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಘಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದರು.

ದೂರು-ಪ್ರತಿದೂರು ದಾಖಲು: ಘಟನೆಯಲ್ಲಿ ಬಂಧಿತ ಲೇಪಾಕ್ಷಿ, ಆತನ ಸಹೋದರ ಅತೀಶ್ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 10 ಜನರ ವಿರುದ್ಧ ದೂರು-ಪ್ರತಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ನಾಗರಾಜ್, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಜಗದೀಶ್ ಹಂಚಿನಾಳ್, ಪೇಪರ್‌ಟೌನ್ ಠಾಣೆ ಇನ್‌ಪೆಕ್ಟರ್ ನಾಗಮ್ಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೀರು ಕಟ್ಟಿ ಬರುವಾಗ ಮಾರಕಾಸ್ತ್ರಗಳಿಂದ ಹಲ್ಲೆ: ಸಂಜೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಕೆ ವಿಚಾರದಲ್ಲಿ ಪರಸ್ಪರ ಜಗಳವಾಗಿತ್ತು. ತದನಂತರ ರಾತ್ರಿ 9ರ ಸುಮಾರಿಗೆ ಶಾಂತಕುಮಾರ್ ಜಮೀನಿಗೆ ನೀರುಕಟ್ಟಿ ಬರುವಾಗ ಸ್ಥಳೀಯ ಎಮ್ಮೆದೊಡ್ಡಿ ಗ್ರಾಮದ ಮುರಾರ್ಜಿ ಶಾಲೆ ಬಳಿ ಅದೇ ಗ್ರಾಮದ ಲೇಪಾಕ್ಷಿ ಸೇರಿ ಐವರು ಅಡ್ಡಗಟ್ಟಿ ಮಚ್ಚಿನಿಂದ ಹತ್ಯೆ ಮಾಡಿದ್ದಾರೆ ಎಂದು ದೂರಲಾಗಿದೆ.

ಏನಿದು ಗಲಾಟೆ ? ಶಾಂತಕುಮಾರ್ ಹಾಗೂ ಲೇಪಾಕ್ಷಿ ಕುಟುಂಬಗಳ ಜಮೀನು ಅಕ್ಕಪಕ್ಕದಲ್ಲಿದ್ದು ಶಾಂತಕುಮಾರ್ ಅವರ ಜಮೀನಿನಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮಾರ್ ಅಳವಡಿಸಲಾಗಿದೆ. ಆ ಟ್ರಾನ್ಸ್‌ಫಾರ್ಮಾರ್ ಮೂಲಕ ಲೇಪಾಕ್ಷಿ ಕುಟುಂಬದ ಜಮೀನಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ದುರಸ್ತಿಗೀಡಾಗಿದ್ದ ಟ್ರಾನ್ಸ್‌ಫಾರ್ಮರ್ ವಿಚಾರದಲ್ಲಿ ಬುಧವಾರ ಸಂಜೆ ಜಮೀನಿನಲ್ಲಿ ಎರಡೂ ಕುಟುಂಬಗಳ ನಡುವೆ ಗಲಾಟೆಯಾಗಿತ್ತು. ತದನಂತರ ಎಮ್ಮೆದೊಡ್ಡಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆ ಸಮೀಪ ಎರಡೂ ಗುಂಪುಗಳ ನಡುವೆ ಮಾರಾಮಾರಿಯಾಗಿದ್ದು ಇದು ವಿಕೋಪಕ್ಕೆ ತಿರುಗಿ ಮಚ್ಚಿನಿಂದ ಶಾಂತಕುಮಾರ್ ಮೇಲೆ ಹಲ್ಲೆ ನಡೆಸಲಾಗಿತ್ತು. ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡ ಶಾಂತಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಭದ್ರಾವತಿ ತಾಲೂಕು ದೊಡ್ಡೇರಿ ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಹತ್ಯೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿ ಮನೆಗೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದು ಸ್ವಲ್ಪ ಹಾನಿಯಾಗಿದೆ. ಬೈಕ್ ಜಖಂಗೊಳಿಸಿದ್ದು ದೂರು-ಪ್ರತಿದೂರು ದಾಖಲಾಗಿದೆ. ತನಿಖೆ ಮುಂದುವರಿದಿದೆ. - ಜಿ.ಕೆ.ಮಿಥುನ್‌ಕುಮಾರ್, ಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net