

ನರಗುಂದ: ಬಸವತತ್ವ ಹೇಳುವುದು ಸುಲಭ ಆಚರಣೆಯಲ್ಲಿ ತರುವುದು ಬಹಳ ಕಷ್ಟದ ಕೆಲಸ. ಬಸವಣ್ಣನವರ ಪೂರ್ವದಲ್ಲಿ ಈ ಸಮಾಜ ಹೇಗಿತ್ತು ಎಂದು ಸಿಂಹಾಲೋಕನ ಮಾಡುವುದಕ್ಕಿಂತ ಬಸವಣ್ಣನವರ ಹೆಸರು ಹೇಳುವ ಸಮಾಜ ಹೇಗಿದೆ ಎನ್ನುವುದನ್ನು ನಾವು ಅರಿಯಬೇಕಿದೆ ಎಂದು ನಿವೃತ್ತ ಬಿಇಒ ಮಂಗಳಾ ಪಾಟೀಲ ಹೇಳಿದರು.
ಪಟ್ಟಣದ ಅಧ್ಯಾಪಕ ನಗರದ ಬಡಾವಣೆಯಲ್ಲಿ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಶ್ರಾವಣಮಾಸದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ವಚನಾಮೃತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ಅರಿತಿದ್ದರೂ ವ್ಯಕ್ತಿಗತ ಬದುಕಿನಲ್ಲಿ ಹೆಚ್ಚಿನ ಭಕ್ತರು ಅದನ್ನು ಅಳವಡಿಸಿಕೊಂಡಿಲ್ಲ. ಬಸವಣ್ಣನವರು ಲೋಕವನ್ನು ಪರಿವರ್ತನೆ ಮಾಡಿಕೊಳ್ಳಿ ಎಂದು ತಮ್ಮ ವಚನಗಳ ಮೂಲಕ ಹೇಳಿದ್ದು ವ್ಯಕ್ತಿ ಬದಲಾಗದೇ ದೇಶ ಬದಲಾಗುವುದಿಲ್ಲ. ಇಂತಹ ವಿಚಾರಗಳ ಕುರಿತು ಪ್ರತಿಯೊಬ್ಬರು ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಜಿ. ಮಣ್ಣೂರಮಠ ಮಾತನಾಡಿ, ಒಬ್ಬ ವ್ಯಕ್ತಿ ಎಷ್ಟು ಅಧ್ಯಯನ ಮಾಡಿದ್ದಾನೆ? ಸಂತರ ಎಷ್ಟು ಪ್ರವಚನ ಕೇಳಿದ್ದಾನೆ ಎನ್ನುವುದು ಇಲ್ಲಿ ಮುಖ್ಯವಲ್ಲ, ಅಧ್ಯಯನ ಮತ್ತು ಪ್ರವಚನದ ಪರಿಣಾಮ ಅವರ ವ್ಯಕ್ತಿಗತ ಬದುಕಿನ ಮೇಲೆ ಏನಾಗಿದೆ ಎನ್ನುವುದು ಗಮನಾರ್ಹ ಎಂದು ಹೇಳಿದರು.
ಕೆ.ಎನ್.ಹದಗಲ್. ಟಿ.ಆರ್.ಉಳ್ಳೇಗಡ್ಡಿ, ಎಸ್.ಬಿ. ಭಜಂತ್ರಿ ವಚನ ಸಂಗೀತ ಪ್ರಸ್ತುತಪಡಿಸಿದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಕನ್ಯಾ ಸಾಲಿ, ಜ್ಯೋತಿ ಯಳ್ಳೂರ, ಡಿ.ಆರ್. ಗದ್ದನಕೇರಿ, ಸಿ.ಎಸ್. ಸಾಲೂಟಗಿಮಠ, ಪ್ರವೀಣ ಕುಲಕರ್ಣಿ, ವಿದ್ಯಾ ಸುಳ್ಳದ, ಮಂಜುನಾಥ ಘಾಳಿ, ವಿ.ಎನ್. ಕೊಳ್ಳಿಯವರ, ಶಿವಲೀಲಾ ಕೊಳ್ಳಿಯವರ, ಅಜ್ಜಪ್ಪ ಹೌದಕ್ಕನವರ, ಸಾವಿತ್ರಿ ಅಪ್ರೋಜಿ, ಮಂಜುಳಾ ಅಸುಂಡಿ, ಎಸ್.ಎಸ್. ಪೂಜಾರ, ಆರ್.ಕೆ. ಐನಾಪೂರ, ಶಿವಯೋಗಿ ಹೆಗಡಾಳ, ಎಫ್.ಎಂ. ಹಾಡಕರ್, ಎಚ್.ಎ. ಮುದಿಯಪ್ಪನವರ, ವಿ.ಐ. ಕುಂಬಾರ ಇತರರಿದ್ದರು. ಡಾ.ಎಂ.ಪಿ. ಕುಲಕರ್ಣಿ ಸ್ವಾಗತಿಸಿದರು. ಸುಕನ್ಯಾ ಸಾಲಿ ಪರಿಚಯಿಸಿದರು. ಪ್ರವೀಣ ಕುಲಕರ್ಣಿ ನಿರ್ವಹಿಸಿದರು.