ವರ್ಗಾವಣೆಗೊಂಡ ಶಿಕ್ಷಕರ ಹೃದಯಸ್ಪರ್ಶಿ ಬೀಳ್ಕೊಡುಗೆ : ನಿಸ್ವಾರ್ಥ ಮನೋಭಾವದ ಸೇವೆ ಎಲ್ಲರಿಗೂ ಮಾದರಿ

IMG-20230831-WA0055.jpg
Published on

ಬೆಳಗಾವಿ : ಬೀಳ್ಕೊಡುಗೆ ಎಂಬುದು ನೇರವಾಗಿ ಹೃದಯವನ್ನು ತಟ್ಟುವ ಮನಸ್ಸು ಭಾರವಾಗಿಸುವ ಕಾರ್ಯಕ್ರಮ ಅದರಲ್ಲೂ ಶಾಲೆಗಾಗಿ ಮಕ್ಕಳಿಗೆ ಕಳಕಳಿಯ ಶಿಕ್ಷಣವನ್ನು ನೀಡುವುದರ ಜೊತೆಗೆ ಮಕ್ಕಳ, ಪಾಲಕರ,ಊರ ಹಿರಿಯರ ಪ್ರೀತಿಗೆ ಪಾತ್ರರಾಗಿ ಗಡಿಭಾಗದ ಕನ್ನಡ ಶಾಲೆಯನ್ನು ಸರ್ವ ರೀತಿಯಲ್ಲಿ ಸುಧಾರಣೆ ಮಾಡಲು ಶ್ರಮಿಸಿದ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಕ ಮತ್ತು ಕನ್ನಡಪರ ಕಾಳಜಿ ಹೊಂದಿದ್ದ ಶಿಕ್ಷಕ ಶಿವಾನಂದ ತಲ್ಲೂರ ಅವರ ಸೇವೆ ನಿಜಕ್ಕೂ ಮಾದರಿಯಾದದ್ದು ಎಂದು ಬೆಳಗಾವಿಯ ಕಡೋಲಿಯ ರೈತ ಮುಖಂಡ, ಹೋರಾಟಗಾರ ಅಪ್ಪಸಾಹೇಬ ದೇಸಾಯಿ ಹೇಳಿದರು.

ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಕಡೋಲಿ ಶಾಲೆಯಿಂದ ಕಾಕತಿಯ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡ ಶಿವಾನಂದ ತಲ್ಲೂರ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ತಮ್ಮ ಭಾವನೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಗರ ಪಾಟೀಲ ಶಿಕ್ಷಕರನ್ನು ಸತ್ಕರಿಸಿ ಮಾತನಾಡಿ ಶಿಕ್ಷಕ ವೃತ್ತಿ ಕೇವಲ ಪಾಠ ಮಾಡುವುದಷ್ಟೇ ಅಲ್ಲ ಮಕ್ಕಳ, ಪಾಲಕರ ಮತ್ತು ಶಾಲೆ ಆಗು ಹೋಗುಗಳಿಗೆ ಸ್ಪಂದಿಸುವ ಸರಳ ನಡೆ ನುಡಿಗಳಿಂದ ಊರ ಜನರ ಮನವನ್ನು ಗೆದ್ದ ತಲ್ಲೂರ ಅವರಂತಹ ಶಿಕ್ಷಕರು ಅಪರೂಪ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಗೌಡಪ್ಪ ಪಾಟೀಲ ಸಿದ್ದಪ್ಪ ಶಾಪುರಕರ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಸನದಿ, ರಾಮಚಂದ್ರ ಹಿತ್ತಲಮನಿ, ಕಲ್ಲಪ್ಪ ಬಿಜಗತ್ತಿ, ರಾಜಶ್ರೀ ಕುಂಬಾರ,ಲಕ್ಷ್ಮಿ ಪಾಟೀಲ, ಲಕ್ಷ್ಮಿ ಗುಡಿಮನಿ,ಲಕ್ಷ್ಮಿ ಗಾವಡೆ, ರಾಜು ಸುತಾರ, ಕನ್ನಡ ಮತ್ತು ಉರ್ದು ಶಾಲೆಯ ಶಿಕ್ಷಕ ಶಿಕ್ಷಕಿ ಬಳಗ ಸೇರಿದಂತೆ ಗ್ರಾಮದ ಹಿರಿಯರು, ಪಾಲಕರು ಮತ್ತು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕಿ ಮಹಾದೇವಿ ಹೊಟ್ಟಿನವರ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಎಸ್ ವೈ ಖಾನಪೇಟ ಪರಿಚಯಿಸಿದರು.ಎಸ್. ಎಸ್.ಸತ್ಯನಾಯಕ ನಿರೂಪಿಸಿದರು ಕೊನೆಯಲ್ಲಿ ಕೆ.ಎಫ್ ಭಾವಿಹಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net