

ಮೈಸೂರು: ನಂಜನಗೂಡಿನಲ್ಲಿ ಪಿಎಸ್‌ಐ ಪುತ್ರನ ವೀಲಿಂಗ್ ಪುಂಡಾಟಕ್ಕೆ ವೃದ್ಧ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮಗ ಮಾಡಿದ ತಪ್ಪಿಗೆ ತಾಯಿ ಪಿಎಸ್‌ಐ ಯಾಸ್ಮಿನ್ ತಾಜ್‌ಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.
ನಂಜನಗೂಡು ಸಂಚಾರ ವಿಭಾಗದ ಪಿಎಸ್‌ಐ ಯಾಸ್ಮಿನ್ ತಾಜ್ ಪುತ್ರ ಸೈಯ್ಯದ್ ಐಮಾನ್ ನಂಜಗೂಡಿನಲ್ಲಿ ಶನಿವಾರ ವೀಲಿಂಗ್ ಮಾಡಿ ವೃದ್ಧರೊಬ್ಬರನ್ನು ಬಲಿ ಪಡೆದಿದ್ದ. ಈ ವಿಚಾರ ತಿಳಿಯುತ್ತಿದ್ದಂತೆಯೇ ನಂಜನಗೂಡು ಪೊಲೀಸರು ಶನಿವಾರ ರಾತ್ರಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಸೈಯ್ಯದ್ ಐಮಾನ್ ವೀಲಿಂಗ್ ಪುಂಡಾಟಕ್ಕೆ ರಸ್ತೆ ಬದಿಯಲ್ಲಿ ಜಾನುವಾರು ಮೇಯಿಸುತ್ತಿದ್ದ ಇಮ್ಮಾವು ಗ್ರಾಮದ ನಿವಾಸಿ ಗುರುಸ್ವಾಮಿ (65) ಮೃತಪಟ್ಟರು. ಗುರುಸ್ವಾಮಿ ಪುತ್ರ ಮಹದೇವಸ್ವಾಮಿ ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಸೈಯ್ಯದ್ ಐಮಾನ್ ನಂಬರ್ ಪ್ಲೇಟ್ ಇಲ್ಲದೆ ಬೈಕ್ ಚಾಲಿಸುತ್ತಿದ್ದ. ಗುರುಸ್ವಾಮಿ ಅವರಿಗೆ ಡಿಕ್ಕಿ ಹೊಡೆದ ಬೈಕ್‌ಗೆ ನಂಬರ್ ಪ್ಲೇಟ್ ಇರಲಿಲ್ಲ. ಬೈಕ್‌ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಟುಂಬಸ್ಥರ ಪ್ರತಿಭಟನೆ: ಪಿಎಸ್‌ಐ ಯಾಸ್ಮಿನ್ ತಾಜ್ ಪುತ್ರ ಸೈಯ್ಯದ್ ಐಮಾನ್‌ನ ವೀಲಿಂಗ್ ಪುಂಡಾಟಕ್ಕೆ ಬಲಿಯಾದ ಗುರುಸ್ವಾಮಿ ಅವರ ಮರಣೋತ್ತರ ಪರೀಕ್ಷೆ ಭಾನುವಾರ ನಗರದ ಕೆ.ಅರ್. ಆಸ್ಪತ್ರೆಯಲ್ಲಿ ನಡೆಯಿತು. ಈ ಸಂದರ್ಭ ಯಾಸ್ಮಿನ್ ತಾಜ್ ಅಮಾನತಿಗೆ ಒತ್ತಾಯಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.