

ಹುಬ್ಬಳ್ಳಿ: ರಾಜ್ಯದಲ್ಲಿ ವರ್ಗಾವಣೆ ವಿಚಾರದಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. 10-12 ಲಕ್ಷ ರೂ. ಕೊಟ್ಟವರಿಗೆ ಆಯಕಟ್ಟಿನ ಸ್ಥಾನಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ವರ್ಗಾವಣೆಯ ಹರಾಜು ಪ್ರಕ್ರಿಯೆ ನಡೆದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿಯೂ ಈ ರೀತಿಯ ಹರಾಜು ಪ್ರಕ್ರಿಯೆ ನಡೆದಿರುವ ಬಗ್ಗೆ ಅಧಿಕಾರಿಗಳು ನನಗೆ ವಯಕ್ತಿಕವಾಗಿ ಕರೆ ಮಾಡಿ ನೋವು ತೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಮೇಲೆ ಮಾಡಿದ್ದ ಆರೋಪದ ಹತ್ತು ಪಟ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದರು.
ಕಾಂಗ್ರೆಸ್ ನೇತಾರ ರಾಹುಲ ಗಾಂಧಿಯವರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆಯೇ ಹೊರತು, ಅವರು ಮಾಡಿದ್ದು ಸರಿ ಅಂತ ಒಪ್ಪಿಕೊಂಡಿಲ್ಲ. ಮೋದಿ ಉಪನಾಮ ಹೆಸರಿನಲ್ಲಿ ಅವರು ಮಾತನಾಡಿದ್ದು ತಪ್ಪು ಅಂತಾನೇ ಕೋರ್ಟ್ ಹೇಳಿದೆ. ಕೋರ್ಟ್ ತೀರ್ಪು ಆಧರಿಸಿ ಲೋಕಸಭಾ ಸ್ಪೀಕರ್ ರಾಹುಲ್ ಗಾಂಧಿ ಸಂಸದ ಸ್ಥಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳತ್ತಾರೆ ಎಂದು ಹೇಳಿದರು.
ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿಷಯದಲ್ಲಿ ಹಾಗೇ ಮಾತನಾಡಬಾರದಿತ್ತು. ಯಾವುದೇ ವ್ಯಕ್ತಿಯ ಬಣ್ಣ ಮತ್ತು ಪ್ರದೇಶ ನೋಡಿ ಟೀಕೆ ಮಾಡಬಾರದು. ಈ ಕುರಿತು ಅರಗ ಜ್ಞಾನೇಂದ್ರ ಅವರಿಗೆ ತಿಳಿ ಹೇಳುತ್ತೇವೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ವಿದ್ರೋಹಿ ಶಕ್ತಿಗಳಿಗೆ ಕುಮ್ಮಕ್ಕು ಸಿಕ್ಕಂತಾಗಿದೆ. ಉಡುಪಿ ಕಾಲೇಜ್ ಮತ್ತು ಹುಬ್ಬಳ್ಳಿ ಕಾಲೇಜ್ ಪ್ರಕರಣವೇ ಇದಕ್ಕೆ ಸಾಕ್ಷಿ. ನಾವು ಏನೂ ಮಾಡಿದರೂ ಕಾಂಗ್ರೆಸ್ ಸರ್ಕಾರ ಸಂರಕ್ಷಣೆ ನೀಡುತ್ತೆ ಎಂದು ತಿಳಿದು ಹೀಗೆ ಮಾಡಲಾಗುತ್ತಿದೆ. ಆದ್ದರಿಂದ ಇಂಥ ಕೃತ್ಯಗಳು ನಡೆಯುತ್ತಿವೆ ಎಂದು ಹೇಳಿದರು.