

ಹುಬ್ಬಳ್ಳಿ: ಹಳೆಯ ನೋಟುಗಳ ವರ್ಗಾವಣೆಯಿಂದ ಹೆಚ್ಚು ಹಣ ಬರಬಹುದೆಂದು ನಂಬಿದ ಇಲ್ಲಿನ ಉಣಕಲ್ ಕ್ರಾಸ್ನ ಟಿಂಬರ್ ಯಾರ್ಡ್ ನಿವಾಸಿ ದಿನೇಶ ಪಿ. ಎಂಬುವರು 19.01 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಹಳೆಯ ನೋಟುಗಳ ಬದಲಾವಣೆಗೆ ಹೆಚ್ಚು ಹಣ ನೀಡಲಾಗುವುದೆಂಬ ಫೇಸ್ಬುಕ್ ಲಿಂಕ್ ಅನ್ನು ದಿನೇಶ ಕ್ಲಿಕಿಸಿದ್ದಾರೆ. ಅದರಲ್ಲಿದ್ದ ಮೊಬೈಲ್ ಫೋನ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿ ಪರಿಚಯಿಸಿಕೊಂಡ ಕಪಿಲ್ ಗುಪ್ತಾ ಎಂಬಾತ ಹಳೆಯ ನೋಟುಗಳ ಫೋಟೋಗಳನ್ನು ವಾಟ್ಸ್ಆಪ್ಗೆ ಕಳಹಿಸಲು ತಿಳಿಸಿದ್ದಾನೆ.
5 ರೂ. ಒಂದು ನೋಟು, 2 ಮತ್ತು 1 ರೂ.ಗಳ ಮೂರು ನೋಟುಗಳ ಫೋಟೊಗಳನ್ನು ದಿನೇಶ ವಾಟ್ಸ್ಆಪ್ ಮೂಲಕ ಕಳಹಿಸಿದ್ದಾರೆ. ಹಳೆಯ ನೋಟುಗಳ ಮೌಲ್ಯ 54.86 ಲಕ್ಷ ರೂ. ಆಗುತ್ತದೆ. ನಿಮ್ಮ ಒಪ್ಪಿಗೆ ಇದ್ದರೆ ಖರೀದಿಸಲಾಗುವುದು. ಆಧಾರ್ ಕಾರ್ಡ್ ಫೋಟೋ ಕಳುಹಿಸಿ, 620 ರೂ. ನೋಂದಣಿ ಫೀಸ್ ತುಂಬಲು ಕಪಿಲ್ ಹೇಳಿದ್ದಾನೆ. 620 ರೂ. ತುಂಬಿದ ಬಳಿಕ, ತೆರಿಗೆ ದರ, ಜಿಎಸ್ಟಿ ಹೀಗೆ ಹಲವು ಕಾರಣ ನೀಡಿ ದಿನೇಶ ಹಾಗೂ ಅವರ ಪುತ್ರನ ವಿವಿಧ ಖಾತೆಗಳಿಂದ 19,01,624 ರೂ. ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.