

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕರು ಈಗ ಮತ್ತೆ ಬದಲಾಗಿದ್ದಾರೆ. ಪ್ರಸ್ತುತ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎ.ಎಂ. ಬಸವರಾಜ ಅವರನ್ನು ಕೊಡಗು ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ತೆರವಾದ ಈ ಹುದ್ದೆಗೆ ಹಿಂದೆ ಉಪನಿರ್ದೇಶಕರಾಗಿದ್ದ ನಾಗರಾಜ ಎಂ. ಅವರನ್ನು ಮರು ಸ್ಥಾಪಿಸಿ, ನೇಮಕ ಮಾಡಿ ಇಲಾಖೆ ಆದೇಶ ಹೊರಡಿಸಿದೆ. ಬಸವರಾಜ ಅವರ ವಿರುದ್ಧ ಇಲಾಖೆಯ ಸಿಬ್ಬಂದಿಯಿಂದ ದೂರುಗಳಿದ್ದವು. ಹೀಗಾಗಿ ಬಸವರಾಜ ಅವರನ್ನು ಬೇರೆಡೆ ವರ್ಗ ಮಾಡಲಾಗಿತ್ತು. ಬಸವರಾಜ ಅವರು, ಇದು ಅವಧಿಪೂರ್ವ ವರ್ಗಾವಣೆ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೊರೆ ಹೋಗಿದ್ದರು. ಅಧಿಕಾರಿಗಳ ಮೇಲೆ ದೂರುಗಳು ಇದ್ದಾಗ, ಇಲಾಖೆ ಹಿತದೃಷ್ಟಿಯಿಂದ ಅಗತ್ಯವಿದ್ದರೆ ಇಲಾಖೆ ವರ್ಗಾವಣೆ ಮಾಡುವುದು ತಪ್ಪಲ್ಲ ಎಂದು ಕೆಎಟಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬಸವರಾಜ ಅವರು, ಹೈಕೋರ್ಟ್ ಮೊರೆ ಹೋಗಿ ಕೆಎಟಿ ಆದೇಶಕ್ಕೆ ತಡೆಯಾಜ್ಞೆ ತಂದು, ಹುದ್ದೆಯಲ್ಲಿ ಮುಂದುವರಿದ್ದರು. ಬಳಿಕ ಹೈಕೋರ್ಟ್ ನ್ಯಾಯ ಆಲಿಸಿ, ಕೆಎಟಿ ನೀಡಿದ ಆದೇಶ ಸರಿ ಇದೆ ಎಂದು ಫೆ. 9ರಂದು ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಫೆ. 14ರಂದು ಬಸವರಾಜ ಅವರನ್ನು ಬೇರೆಡೆ ವರ್ಗ ಮಾಡಿದೆ. ಈ ಮೊದಲಿದ್ದ ನಾಗರಾಜ ಅವರನ್ನು ಮರುನೇಮಕ ಮಾಡಿದ್ದು, ನಾಗರಾಜ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ಈ ಇಬ್ಬರು ಉಪನಿರ್ದೇಶಕರ ಗುರ್ಚಿ ಕಿತ್ತಾಟದಿಂದ ಇಲಾಖೆ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿತ್ತು. ಇಲಾಖೆಯಲ್ಲಿ ಬಹಳಷ್ಟು ಕಾರ್ಯಗಳು ಹಿನ್ನೆಡೆಯಾಗಿತ್ತು.