ಮುಂದಿನ ಜನಾಂಗಕ್ಕೆ ಸಂಸ್ಕೃತಿ ವರ್ಗಾವಣೆ ಅವಶ್ಯಕ; ಕಲಾಧ್ವನಿ ಕಾರ್ಯಕ್ರಮದಲ್ಲಿ ಯು.ಟಿ.ಖಾದರ ಅಭಿಮತ

kcp
Published on

ಬೆಂಗಳೂರು: ನಮ್ಮ ಮೂಲ ಸಂಸ್ಕೃತಿ ಮತ್ತು ಪರಂಪರೆಗಳನ್ನು ಮುಂದಿನ ಜನಾಂಗಕ್ಕೆ ವರ್ಗಾವಣೆ ಮಾಡುವ ಅವಶ್ಯಕತೆ ಇದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಇನ್‌ಫೋಸಿಸ್ ಫೌಂಡೇಶನ್ ಮತ್ತು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಆಯೋಜಿಸಿದ್ದ ಕಲಾಧ್ವನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಡೀ ದೇಶದ ಸಂಸ್ಕೃತಿ ದಕ್ಷಿಣ ಭಾರತದಲ್ಲಿ ವಿಶೇಷವಾಗಿದೆ. ಅದರಲ್ಲೂ ದಕ್ಷಿಣ ಭಾರತದ ಸಂಸ್ಕೃತಿಯ ಹೆಗ್ಗುರುತು ಕರ್ನಾಟಕದಲ್ಲಿ ಕಾಣಬಹುದು. ಅಂತಹ ಸಂಸ್ಕೃತಿಯ ನಾಡಿನಲ್ಲಿ ಕಲಾಧ್ವನಿಯಂತಹ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಆಧುನಿಕ ತಂತ್ರಜ್ಞಾನ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ನಡುವೆ ನಮ್ಮ ಸಂಸ್ಕೃತಿ ಬಲವಾಗಿರುವುದರಿಂದ ಇಡೀ ಜಗತ್ತಿಗೆ ದಿಕ್ಸೂಚಿಯಾಗಿ ಕೆಲಸ ಮಾಡುವ ಶಕ್ತಿ ಇದೆ. ಭಾರತದ ಸಂಸ್ಕೃತಿ ವಿವಿಧತೆಯಲ್ಲಿ ಏಕತೆಯನ್ನು ಒಳಗೊಂಡಿದೆ ಎಂದರು. ಇನ್‌ಫೋಸಿಸ್ ಫೌಂಡೇಶನ್, ಭಾರತೀಯ ವಿದ್ಯಾಭವನ ಸಂಸ್ಥೆಗಳು ಸಮಾಜದ ಒಳಿತಿಗೆ ಅಗತ್ಯವಿರುವ ಹಲವು ಉಪಯುಕ್ತ ಕೆಲಸಗಳನ್ನು ಮಾಡುತ್ತಲೇ ಇರುತ್ತವೆ. ಇಂತಹ ಕಾರ್ಯಕ್ರಮಗಳು ಬಹಳ ಅವಶ್ಯಕ ಆ ಕಾರಣಕ್ಕೆ ಎರಡೂ ಸಂಸ್ಥೆಗಳು ಅಭಿನಂದನೆಗೆ ಅರ್ಹವಾಗಿವೆ. ಮುಂದಿನ ದಿನಮಾನಗಳಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಯು.ಟಿ.ಖಾದರ್ ತಿಳಿಸಿದರು. ಬಿವಿಬಿ ನಿರ್ದೇಶಕ ಜಗದೀಶ ಲಖಾನಿ ಮಾತನಾಡಿ, ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲದೆ ಎರಡು ಸಂಸ್ಥೆಗಳು ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡಲು ಶ್ರಮಿಸುತ್ತಿವೆ. ದೇಶದ ನಾಲ್ಕು ದಿಕ್ಕುಗಳ ಸಂಸ್ಕೃತಿಯ ಸಂಗಮ ಇಲ್ಲಿ ನಿರ್ಮಾಣವಾಗಿದೆ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ.ಚಿರಂಜೀವಿ ಸಿಂಗ್, ಇನ್‌ಫೋಸಿಸ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಮಾರ್ ಧಾರೇಶ್ವರ್, ಬಿವಿಬಿ ಮುಂಬೈ ನಿರ್ದೇಶಕ ಜಗದೀಶ ಲಖಾನಿ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

3 ದಿನ, 800 ಕಲಾವಿದರು, ನಿರಂತರ ಪ್ರದರ್ಶನ

ಮೂರು ದಿನ ಕಲಾಧ್ವನಿ ಕಾರ್ಯಕ್ರಮ ಭಾನುವಾರ (ಜ.26) ದವರೆಗೆ ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳ 800 ಕಲಾವಿದರು ಪಾಲ್ಗೊಂಡಿದ್ದಾರೆ. ದಿನಪೂರ್ತಿ ಆಯಾ ಪ್ರದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಂಗೀತ, ವಾದ್ಯ, ನೃತ್ಯ, ಗಾಯನ ಹಾಗೂ ಸಾಹಸ ಕಲೆಗಳ ಪ್ರದರ್ಶನ ನಡೆಯಲಿದೆ. ಭಾರತೀಯ ಆದಿವಾಸಿ, ಜನಪದ, ಬುಡಕಟ್ಟು ಹೀಗೆ ವಿವಿಧ ಸಂಸ್ಕೃತಿಯ ಅನಾವರಣ ಹಾಗೂ ಆಯಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

"ಸಾಂಸ್ಕೃತಿಕ ಕ್ಷೇತ್ರದ ಉಳಿವಿಗೆ ನಿರಂತರ ಶ್ರಮಿಸುತ್ತಿರುವ ಇನ್‌ೆಸಿಸ್ ೌಂಡೇಶನ್ ಮುಖ್ಯಸ್ಥರಾದ ನಾರಾಯಣಮೂರ್ತಿ ಹಾಗು ಸುಧಾಮೂರ್ತಿ ಮತ್ತು ಭಾರತೀಯ ವಿದ್ಯಾಭವನದ ದಿವಂಗತ ಮತ್ತೂರು ಕೃಷ್ಣಮೂರ್ತಿಯವರನ್ನು ಸ್ಮರಿಸಿಕೊಳ್ಳಬೇಕು. ಅವರ ದೂರದೃಷ್ಟಿಯ ಲವೇ ಇಂತಹ ಕಾರ್ಯಕ್ರಮ ಮೂಡಿ ಬರಲು ಕಾರಣ." -ಡಾ.ಬಿ.ಎಲ್.ಶಂಕರ್, ಚಿತ್ರಕಲಾ ಪರಿಷತ್ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net