

ಶನಿವಾರಸಂತೆ: ಗ್ಯಾರಂಟಿ ಯೋಜನೆಗಳ ಮೂಲಕ ಭ್ರಷ್ಟಾಚಾರವಿಲ್ಲದೆ 52 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ಜನರಿಗೆ ತಲುಪಿಸುತ್ತಿರುವ ಹೆಗ್ಗಳಿಕೆ ನಮ್ಮದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಬೋಸರಾಜು ತಿಳಿಸಿದರು.
ಕೊಡ್ಲಿಪೇಟೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಅಭಿವೃದ್ಧಿಗೊಳಿಸಲಾಗಿರುವ ನಂದಿಪುರ ಕೆರೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2023ರ ಆಗಸ್ಟ್‌ನಲ್ಲಿ ಈ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ನಮ್ಮ ಇಲಾಖೆಯ ವತಿಯಿಂದ 3.90 ಕೋಟಿ ರೂ. ವೆಚ್ಚದಲ್ಲಿ ನಂದಿಪುರ ಕೆರೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಇಲಾಖೆಯು ಕೆರೆಗಳ ಸೌಂದರ್ಯೀಕರಣ ಮಾಡಿದ ಏಕೈಕ ಕೆರೆ ಇದಾಗಿದೆ. ನಗರ ಪ್ರದೇಶಗಳಲ್ಲಿ ಅಭಿವೃದ್ಧಿಗೊಳಿಸುವ ರೀತಿಯಲ್ಲಿ ವಾಕಿಂಗ್ ಟ್ರ್ಯಾಕ್, ಮಕ್ಕಳಿಗೆ ಆಟವಾಡುವ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು. ಹಿರಿಯ ವಕೀಲರಾದ ಕೊಡ್ಲಿಪೇಟೆಯ ಚಂದ್ರಮೌಳಿ ಅವರು ಈ ಯೋಜನೆಯನ್ನು ತರಲು ಬಹಳಷ್ಟು ಪ್ರಯತ್ನ ಪಟ್ಟಿದ್ದಾರೆ. ಅವರ ಪ್ರಯತ್ನದಿಂದಾಗಿ ಹಾಗೂ ಒತ್ತಾಸೆಯಿಂದಾಗಿ ಕೆರೆ ಅಭಿವೃದ್ಧಿಗೊಂಡಿದೆ. ಕೊಡ್ಲಿಪೇಟೆಯ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಜನಪರ ಆಡಳಿತವನ್ನು ನೀಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ದೇಶದಲ್ಲೇ ಮಾದರಿಯಾಗಿದೆ. ಯಾವುದೇ ಭ್ರಷ್ಟಾಚರವಿಲ್ಲದೆ 52 ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ನೇರವಾಗಿ ಜನರಿಗೆ ತಲುಪಿಸುತ್ತಿರುವ ಹೆಗ್ಗಳಿಕೆ ನಮ್ಮ ರಾಜ್ಯದ್ದಾಗಿದೆ ಎಂದರು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಿಂದ ಅಭಿವೃದ್ಧಿಗೊಳಿಸಲಾಗಿರುವ ಕೆರೆಯನ್ನು ಗ್ರಾಮಸ್ಥರು ಸರಿಯಾಗಿ ನಿರ್ವಹಣೆ ಮಾಡಬೇಕು. ಕೆಲವಷ್ಟು ಕಾಮಗಾರಿಗಳು ಬಾಕಿಯಿದ್ದು ಅದರ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯಿತಿ ವತಿಯಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ ಅವರು, ಅಭಿವೃದ್ಧಿಗೊಂಡಿರುವ ನಂದಿಪುರ ಕೆರೆಯನ್ನು ಎಲ್ಲರೂ ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅನೈತಿಕ ಚಟುವಟಿಕೆ ನಡೆಯದಂತೆ ಎಚ್ಚರವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಕಲಾ, ಪ್ರಸಾಂತ್, ಪ್ರಸಾದ್, ಜನಾರ್ದನ್, ಪ್ರಮುಖರಾದ ಚಂದ್ರಮೌಳಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜ್, ವಿ.ಪಿ.ಶಶಿಧರ್, ಯತೀಶ್, ಉದಯ್ಕುಮಾರ್, ಬಿ.ಬಿ.ಸತೀಶ್, ಶರತ್ ಶೇಖರ್, ಯತೀಶ್, ಕೊಡ್ಲಿಪೇಟೆ ಗ್ರಾಪಂ ಅಧ್ಯಕ್ಷೆ ಅಪ್ಸರಾ ಬೇಗಂ, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕುಮಾರಸ್ವಾಮಿ, ಎಡಿಸಿ ಐಶ್ವರ್ಯಾ ಮುಂತಾದವರಿದ್ದರು.