ಮೈಸೂರು: ನಗರದ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಉದ್ದೇಶ ಪೂರ್ವಕವಾಗಿ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡುವ ಮೂಲಕ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುತ್ತಿವೆ. ಹೀಗಾಗಿ ಇವುಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಚೋರನಹಳ್ಳಿ ಶಿವಣ್ಣ ಆಗ್ರಹಿಸಿದರು.
9ನೇ ತರಗತಿ ಮುಗಿಯುತ್ತಿರುವಂತೆ ಸರಿಯಾಗಿ ಓದಲು ಬರುವುದಿಲ್ಲ ಎನ್ನುವ ಕಾರಣ ನೀಡಿ, ಬಲವಂತವಾಗಿ ವರ್ಗಾವಣೆ ಪತ್ರ ನೀಡಲಾಗುತ್ತಿದೆ. ತಮ್ಮ ಸಂಸ್ಥೆ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಸ್ಥಾನ ಪಡೆಯಬೇಕು ಎನ್ನುವ ಉದ್ದೇಶ ಇದರ ಹಿಂದಿದೆ. ಇದರಿಂದ ಹತ್ತನೇ ತರಗತಿ ಶಿಕ್ಷಣದಿಂದ ಮಕ್ಕಳು ದೂರ ಉಳಿಯುವಂತೆ ಮಾಡುತ್ತಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಎಲ್‌ಕೆಜಿಯಿಂದ 9ನೇ ತರಗತಿವರೆಗೂ ಒಂದೇ ಶಾಲೆಯಲ್ಲಿ ಓದಿದ್ದು, ಈಗ ಹತ್ತನೇ ತರಗತಿಗೆ ದಾಖಲಾಗಬೇಕಾಗಿತ್ತು. ಆದರೆ ವರ್ಗಾವಣೆ ಪತ್ರ ನೀಡಿ ಕಳುಹಿಸಲಾಗಿದೆ. ಇಂತಹ ವಿದ್ಯಾರ್ಥಿಗಳಲ್ಲಿ ದಲಿತ ಹಾಗೂ ಒಬಿಸಿ ಮಕ್ಕಳೇ ಹೆಚ್ಚಾಗಿದ್ದಾರೆ. ಈ ಬಗ್ಗೆ ಶಿಕ್ಷಣಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಡಿಸಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ: ವರ್ಗಾವಣೆ ಪತ್ರ ನೀಡಿದರೆ ವಿದ್ಯಾರ್ಥಿ ಹತ್ತನೇ ತರಗತಿಗೆ ಬೇರೆ ಶಾಲೆಗೆ ಸೇರಲು ಸಾಧ್ಯವೇ, ಇತರೆ ಶಿಕ್ಷಣ ಸಂಸ್ಥೆಗಳು ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಈ ಸಮಸ್ಯೆ ಬಗೆಹರಿಸಿ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲು ಎರಡು ಮೂರು ದಿನ ಗಡುವು ನೀಡಲಾಗಿದೆ. ನಿರ್ಲಕ್ಷಿಸಿದರೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಮುಖಂಡರಾದ ನಟರಾಜು, ಸೋಮನಾಯಕ, ವರುಣಾ ಮಹೇಶ, ಆಲಗೂಡು ಚಂದ್ರಶೇಖರ, ಬಿಳಿಕೆರೆ ದೇವರಾಜು, ಕೆ.ವಿ. ದೇವೇಂದ್ರ ಇದ್ದರು.