

ಶೃಂಗೇರಿ: ಜಿಲ್ಲೆಯಲ್ಲಿ 2002ರಲ್ಲಿ ಜಿಲ್ಲಾಧಿಕಾರಿ ಆದೇಶಕ್ಕೆ 2005ರಲ್ಲಿ ರಾಜ್ಯಸಚಿವ ಸಂಪುಟ ತೆಗೆದುಕೊಂಡ ತೀರ್ಮಾನದಂತೆ ಐದು ತಾಲೂಕುಗಳಿಂದ ಅರಣ್ಯ ಇಲಾಖೆಗೆ ವರ್ಗಾವಣೆಗೊಂಡ ಕಂದಾಯ ಭೂಮಿ 10 ಸಾವಿರ ಹೆಕ್ಟೇರ್ ಪುನಃ ಕಂದಾಯ ಇಲಾಖೆಗೆ ವರ್ಗಾಯಿಸಿದ ಬಳಿಕ ಜಂಟಿ ಸರ್ವೇ ಮಾಡಬೇಕು ಎಂದು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಒತ್ತಾಯಿಸಿದರು.
ಸೆ.3ರಂದು ಸಮಿತಿಯಿಂದ ನಡೆಸಲಾಗುವ ಪ್ರತಿಭಟನಾ ಕರಪತ್ರ ಬುಧವಾರ ಬಿಡುಗಡೆಗೊಳಿಸಿ ಮಾತನಾಡಿ, ಅಂದು ಕುವೆಂಪು ಬಸ್ ನಿಲ್ದಾಣದಿಂದ ತಾಲೂಕು ಕಚೇರಿತನಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಅಂದಿನ ಜಿಲ್ಲಾಧಿಕಾರಿ ಪೂರ್ವಾಪರ ವಿಮರ್ಶೆ ಮಾಡದೆ ಅರಣ್ಯ ಇಲಾಖೆಗೆ ವರ್ಗಾಯಿಸಿದ ಭೂಮಿಯಿಂದ ಮಲೆನಾಡಿನ ರೈತರು ಹಾಗೂ ಜನಸಾಮಾನ್ಯರು ಆತಂಕದಲ್ಲಿದ್ದಾರೆ. ಮೊದಲು ಕಂದಾಯ ಇಲಾಖೆಗೆ ಜಾಗ ಸಿಗಬೇಕು. ಬಳಿಕ ಜಂಟಿ ಸರ್ವೇ ಮಾಡುವಾಗ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳು ಜತೆಯಲ್ಲಿರಬೇಕು. ಸೆಕ್ಷನ್ 41 ಎಂದು ಇಲಾಖೆಯಲ್ಲಿ ಕುಳಿತು ಸೃಷ್ಟಿಸಿದ ದಾಖಲೆಯನ್ನು ತೋರಿಸಿ ಅರಣ್ಯಾಧಿಕಾರಿಗಳು ಒತ್ತುವರಿ ಖುಲ್ಲಾ ಮಾಡಬಾರದು ಎಂಬುದನ್ನು ಲಿಖಿತ ರೂಪದಲ್ಲಿ ಮೇಲಾಧಿಕಾರಿಗಳು ನೀಡಬೇಕು. ಪ್ರತಿ ಗ್ರಾಪಂಗೆ ಬಡವರಿಗೆ ವಸತಿಗಾಗಿ ಐದು ಎಕರೆ ಜಾಗ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಸಮಿತಿ ನೀಡಿದ ಮನವಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ತಹಸೀಲ್ದಾರ್ ಗೌರಮ್ಮ ಸ್ಪಂದಿಸಿದ್ದಾರೆ. ತಾಲೂಕಿನಲ್ಲಿ ರೈತರ ಹಾಗೂ ಜನಸಾಮಾನ್ಯರ ಪರವಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ನಿಲ್ಲಬೇಕು. ಅರ್ಜಿ ನಮೂನೆ 50-57 ಹಾಗೂ 94ಸಿ-94ಸಿಸಿಗಳಲ್ಲಿ ಸೊಪ್ಪಿನಬೆಟ್ಟ ಎಂಬ ಷರತ್ತನ್ನು ವಿಧಿಸದೆ ಕಾನೂನು ತಿದ್ದುಪಡಿ ಆಗಬೇಕು. ಬಳಿಕ ಹಕ್ಕುಪತ್ರ, ಪಹಣಿಯನ್ನು ನಿಗದಿತ ಸಮಯದಲ್ಲಿ ನೀಡಬೇಕು. ಅಷ್ಟರವರೆಗೆ ಅರಣ್ಯ ಇಲಾಖೆ ಯಾವ ಜಾಗವನ್ನೂ ಖುಲ್ಲಾ ಮಾಡಬಾರದು ಎಂದು ಆಗ್ರಹಿಸಿದರು.
ಕಸ್ತೂರಿ ರಂಗನ್ ವರದಿಯಲ್ಲಿ ಹಲವು ನಿಯಮಗಳನ್ನು ರೂಪಿಲಾಗಿದೆ. ರಾಸಾಯನಿಕ ವಸ್ತು ಬಳಸಬಾರದು ಎಂಬ ನಿಯಮವಿದೆ. ಮಲೆನಾಡಿನ ರೈತರು ಅಡಕೆ ಬೆಳೆಗೆ ಬೋರ್ಡೋ ಸಿಂಪಡಿಸಬೇಕಾಗುತ್ತದೆ. ಹಾಗಾಗಿ ಈ ವರದಿಯನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಗೌರವಾಧ್ಯಕ್ಷರಾದ ಕಚ್ಚೋಡಿ ಶ್ರೀನಿವಾಸ್, ತ್ಯಾಗರಾಜ್, ಪದಾಧಿಕಾರಿಗಳಾದ ತನಿಕೋಡು ಮಂಜುನಾಥ್, ಆಗುಂಬೆ ಗಣೇಶ್ ಹೆಗಡೆ, ನಾಗೇಂದ್ರ ಕಚಿಗೆ, ಅಂಗುರ್ಡಿ ದಿನೇಶ್, ಪ್ರಸನ್ನ ಬೇಗಾನೆ, ರಮಾದೇವಿ ಇದ್ದರು.