

ಮೈಸೂರು: ಚರ್ಮದ ಮೂಲಕ ಔಷಧ ನೀಡುವ ತಂತ್ರಜ್ಞಾನಗಳು ರೋಗಿಗೆ ಆರಾಮವನ್ನು ಒದಗಿಸುತ್ತವೆ ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಡೀನ್ (ಶೈಕ್ಷಣಿಕ) ಡಾ.ವಿಶಾಲ್‌ಕುಮಾರ್‌ಗುಪ್ತ ತಿಳಿಸಿದರು.
ನಗರದ ಬನ್ನಿಮಂಟಪದ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಗೋಲ್ಡನ್ ಜ್ಯೂಬಿಲಿ ಡಿಜಿಟಲ್ ಥಿಯೇಟರ್‌ನಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಫಾರ್ಮಸಿ ಕಾಲೇಜಿನ ಔಷಧ ತಯಾರಿಕಾ ವಿಭಾಗದಿಂದ ಶುಕ್ರವಾರ ಚರ್ಮದ ಮೂಲಕ ಔಷಧ ನೀಡುವ ತಂತ್ರಜ್ಞಾನಗಳ ಅಭಿವೃದ್ಧಿ ಕುರಿತು ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಚರ್ಮದ ಮೂಲಕ ನೀಡುವ ಔಷಧ ಕಾಯಿಲೆಯುಳ್ಳವರಿಗೆ ಆರಾಮದಾಯಕ ಅನುಭವ ನೀಡುತ್ತದೆ. ಅಲ್ಲದೇ ಸುರಕ್ಷತೆ ಹಾಗೂ ಚಿಕಿತ್ಸೆ ನೀಡುವಿಕೆಯಲ್ಲಿ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು.
ಶೈಕ್ಷಣಿಕ ಕ್ಷೇತ್ರ ಮತ್ತು ಔಷಧ ತಯಾರಿಕಾ ಉದ್ಯಮಗಳ ನಡುವಿನ ಸಹಭಾಗಿತ್ವವೂ ಹೊಸ-ಹೊಸ ಸಂಶೋಧನೆಗಳಿಗೆ ನೂತನ ಮಾರ್ಗಗಳನ್ನು ನಿರ್ಮಾಣ ಮಾಡುತ್ತದೆ. ಆದ್ದರಿಂದ ಎರಡೂ ಕಡೆಯಿಂದಲೂ ಸಹಕಾರ ಅತ್ಯಗತ್ಯ. ಇದರಿಂದಾಗಿ ಯುವ ಸಂಶೋಧಕರಿಗೆ ಔಷಧ ನೀಡುವಲ್ಲಿ ನವೀನ ತಂತ್ರಜ್ಞಾನಗಳನ್ನು ಸಂಶೋಧನೆ ಮಾಡಲು ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಔಷಧ ಉತ್ಪಾದನಾ ಉದ್ಯಮದ ಬೆಳವಣಿಗೆಗೂ ಸಹಾಯವಾಗುತ್ತದೆ. ಕಾಯಿಲೆಯುಳ್ಳವರಿಗೂ ಪರಿಣಾಮಕಾರಿಯಾಗಿ ಶಮನ ಆಗುವ ಔಷಧಗಳು ದೊರೆತಂತಾಗುತ್ತದೆ ಎಂದರು.
ಗ್ಯಾಂಗ್ವಾಲ್ ಹೆಲ್ತ್‌ಕೇರ್ ಸಂಸ್ಥೆಯ ಸಿಪಿಎ ಡಾ.ಎನ್.ಎಸ್.ಚಂದ್ರಶೇಖರ್ ಮಾತನಾಡಿ, ಚರ್ಮದ ಮೂಲಕ ಔಷಧ ನೀಡುವ ಪದ್ಧತಿ ರೋಗಿಗಳಿಗೆ ಬಹಳ ಅನುಕೂಲವಾಗಿರುತ್ತದೆ. ನೋವಿಲ್ಲದ ಹಾಗೂ ಪರಿಣಾಮಕಾರಿಯಾದ ವಿಧಾನವಾಗಿರುವುದರಿಂದ ಚಿಕಿತ್ಸೆಯ ಅನುಸರಣೆಯೂ ಸುಲಭವಾಗುತ್ತದೆ. ಅಡ್ಡ ಪರಿಣಾಮಗಳು ಕಡಿಮೆ ಪ್ರಮಾಣದಲ್ಲಿ ಇರುತ್ತವೆ ಎಂದು ಹೇಳಿದರು.
ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್ ಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೇದರ್ ಎ.ಬದ್ನಿಕರ್, ರಾಜಕಿಶೋರ್ ರಾಜಕ್, ಡಾ.ತೇಜಸ್ ಗುಂಜೀಕರ್, ಶರದ್ ಅಗರವಾಲ್, ಸುರೇಶ್ ಮೊದಲಿಯಾರ್, ಡಾ.ಅಜೀತ್ ನಾರ್ಖೇಡೆ, ಡಾ.ವಿವೇಕ್ ಘಾಟೆ ಉಪನ್ಯಾಸ ನೀಡಿದರು. ದೇಶದ ವಿವಿಧ ಭಾಗಗಳಿಂದ ಬಂದ 125 ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.