ಜಿಲ್ಲೆಯಲ್ಲಿ ವರ್ಗಾವಣೆ ಪಟ್ಟಿ ಸಿದ್ದ?

IMG-20230613-WA0013
Published on

ಮಡಿಕೇರಿ:

ಜಿಲ್ಲೆಯಲ್ಲಿ ದೊಡ್ಡ ಮಟ್ಟದ ವರ್ಗಾವಣೆ ನಡೆಯುವ ಮುನ್ಸೂಚನೆ ಸಿಕ್ಕಿದೆ. ಕೆಲವೊಂದು ಆಯಕಟ್ಟಿನ ಜಾಗದಲ್ಲಿ ಇರುವ ಅಧಿಕಾರಿಗಳು ಎತ್ತಂಗಡಿ ಆಗುವುದು ಖಚಿತ ಎನ್ನಲಾಗುತ್ತಿದೆ. ಕೆಲವರು ಪ್ರಮುಖ ಇಲಾಖೆಯಲ್ಲಿ ೧೦,೧೫ ವರ್ಷಗಳಿಂದ ಒಂದೇ ಕಡೆ ಬೀಡುಬಿಟ್ಟಿದ್ದು ಅಂಥವರು ಜಿಲ್ಲೆಗೆ ಬೇಡವೇ ಬೇಡ ಎನ್ನುವ ವರದಿಯನ್ನು ಸ್ಥಳೀಯ ಕಾಂಗ್ರೆಸಿಗರು ಶಾಸಕರ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗಿನಿಂದ ವರ್ಗ ಆಗಲೇಬೇಕಿರುವ ಅಧಿಕಾರಿಗಳ ಪಟ್ಟಿ ಸಿದ್ಧವಾಗುತ್ತಿದ್ದು, ಇನ್ನು ಒಂದು ತಿಂಗಳಲ್ಲಿ ಎಲ್ಲವೂ ’ರಿಸಫಲ್’ ಶುರುವಾಲಿದೆ ಎನ್ನುತ್ತಿದೆ ಕಾಂಗ್ರೆಸ್ ಮೂಲಗಳು.

ಸರ್ಕಾರಿ ಕೆಲಸ ಎಂದ ಮೇಲೆ ವರ್ಗಾವಣೆ ಸಹಜ. ಸಾಮಾನ್ಯವಾಗಿ ಒಬ್ಬ ಸರ್ಕಾರಿ ನೌಕರ ಒಂದು ಕಡೆಯಲ್ಲಿ ಹೆಚ್ಚೆಂದರೆ ೫ ವರ್ಷ ಇರುವ ಸಾಧ್ಯತೆಗಳು ಇರುತ್ತದೆ. ಆದರೆ ಕೊಡಗಿನಲ್ಲಿ ಕೆಲವು ಇಲಾಖೆಗಳಲ್ಲಿ ಒಂದೇ ಕಡೆ ೨೦ ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವವರು ಇದ್ದಾರೆ. ಕೆಲವರಂತೂ ಆಯಕಟ್ಟಿನ ಹುದ್ದೆಗಳಲ್ಲಿ ಬಲವಾಗಿ ಬೇರೂರಿಬಿಟ್ಟಿದ್ದಾರೆ. ಕೊಡಗಿನ ೨ ವಿಧಾನಸಭಾ ಕ್ಷೇತ್ರಗಳಲ್ಲೂ ಕಳೆದ ೨ ದಶಕಗಳಿಂದ ಬಿಜೆಪಿ ಶಾಸಕರು ಇದ್ದ ಕಾರಣ ಕೆಲವು ಪ್ರಮುಖ ಇಲಾಖೆಗಳಲ್ಲೂ ರಾಜಕೀಯ ಪ್ರಭಾವ ಬಳಸಿಕೊಂಡು ಅಧಿಕಾರಿಗಳು ಮುಂದುವರಿದುಕೊಂಡು ಬಂದಿದ್ದಾರೆ. ಆಯಕಟ್ಟಿನ ಹುದ್ದೆಗಳಲ್ಲಿ ಕುರ್ಚಿಗೆ ಅಂಟಿಕೊಂಡೇ ಇರುವ ಅಧಿಕಾರಿಗಳ ಬಗ್ಗೆ ಸಾಕಷ್ಟು ದೂರುಗಳು ಇದ್ದರೂ ಇಲ್ಲಿಯೇ ಕೆಲಸ ಮಾಡಿಕೊಂಡು ಹೋಗುತ್ತಿರುವುದು ವ್ಯವಸ್ಥೆಯನ್ನೇ ಅಣಕಿಸುವಂತಿದೆ.

ಒಬ್ಬನೇ ಅಧಿಕಾರಿ ಒಂದೇ ಹುದ್ದೆಗೆ ಅಂಟಿಕೊಂಡು ದಶಕಗಳ ಕಾಲ ಆಡಳಿತ ನಡೆಸುವುದು ಭ್ರಷ್ಟಾಚಾರಕ್ಕೆ ದಾರಿ ಮಾಡಿ ಕೊಟ್ಟಂತೆ ಆಗುತ್ತದೆ ಎನ್ನುವ ಅಭಿಪ್ರಾಯಗಳಿದ್ದರೂ ಸರ್ಕಾರಿ ವ್ಯವಸ್ಥೆ ಮಾತ್ರ ತಲೆಕೆಡಿಸಿಕೊಂಡಂತಿಲ್ಲ. ಈ ರೀತಿಯ ಪರಿಪಾಟಗಳಿಂದ ಆಡಳಿತ ವ್ಯವಸ್ಥೆ ಕುಸಿಯುವುದಕ್ಕೂ ಕಾರಣವಾಗಿದೆ. ಸರ್ಕಾರಿ ಯೋಜನೆಗಳು ಫಲಾನುಭವಿಗಳಿಗೆ ತಲುಪುವಲ್ಲೂ ಅಡಚಣೆಗಳು ಉಂಟಾಗುತ್ತಿದೆ. ಕೆಲವೊಂದು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ನೆಪ ಹೇಳಿ ಒಬ್ಬನೇ ವ್ಯಕ್ತಿಗೆ ೩,೪ ಜವಾಬ್ದಾರಿಗಳನ್ನು ಕೊಟ್ಟು ಒಂದೇ ಜಾಗದಲ್ಲಿ ವರ್ಷಗಳ ಕಾಲ ಮುಂದುವರಿಸಿಕೊಂಡು ಬರುತ್ತಿರುವ ಉದಾಹರಣೆಯೂ ಜಿಲ್ಲೆಯಲ್ಲಿ ಕಾಣಬಹುದಾಗಿದೆ.

ಹೊರ ಜಿಲ್ಲೆಗಳಿಂದ ಬಂದು ಕೊಡಗಿನಲ್ಲಿ ಅದಿಪತ್ಯ ಸ್ಥಾಪಿಸಿರುವ ಅಧಿಕಾರಿಗಳಿದ್ದು ಒಂದು ಕತೆಯಾದರೆ, ಪೊಲೀಸ್ ಸೇರಿದಂತೆ ಮತ್ತೆ ಕೆಲವು ಇಲಾಖೆಗಳಲ್ಲಿ ಕೊಡಗು ಮೂಲದ ಅಧಿಕಾರಿಗಳು ಜಿಲ್ಲೆ ಬಿಟ್ಟು ಹೋಗಲು ಮನಸ್ಸು ಮಾಡುತ್ತಿಲ್ಲ. ಎಲ್ಲಿಗೆ ವರ್ಗ ಆದರೂ ತಮ್ಮ ಪ್ರಭಾವ ಬಳಸಿ ಮತ್ತೆ ತವರು ಜಿಲ್ಲೆಗೆ ಬರುತ್ತಿದ್ದಾರೆ. ಇದರಿಂದ ನ್ಯಾಯಸಮ್ಮತವಾಗಿ, ರಾಗ, ದ್ವೇಷಗಳಿಲ್ಲದೆ ಅಧಿಕಾರಿಗಳು, ಸಿಬ್ಬಂದಿ ವರ್ಗದಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಆರೋಪಗಳಿದೆ.

ಕಂದಾಯ, ಪಿಡಬ್ಯುಡಿ, ಪಂಚಾಯತ್‌ರಾಜ್ ಸೇರಿದಂತೆ ಭ್ರಷ್ಟಾಚಾರಕ್ಕೆ ಹೆಚ್ಚು ಅವಕಾಶಗಳು ಇರುವ ಇಲಾಖೆಗಳಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಬಗ್ಗೆ ಕಾಂಗ್ರೆಸ್ ಮುಖಂಡರು ಶಾಸಕರ ಗಮನಕ್ಕೆ ತಂದಿದ್ದಾರೆ. ಶಿಕ್ಷಣ ಇಲಾಖೆಯಲ್ಲೂ ಇಂತಹ ಹಲವು ಪ್ರಕರಣಗಳನ್ನು ಗುರುತಿಸಲಾಗಿದೆ. ಶಿಕ್ಷಕರ ಸಂಖ್ಯೆ ಕಡಿಮೆ ಇದ್ದರೂ ಕೆಲವು ಶಿಕ್ಷರನ್ನು ಬೇರೆ ಇಲಾಖೆಗೆ ನಿಯೋಜನೆ ಮಾಡಲಾಗಿದ್ದು, ಹಲವಾರು ವರ್ಷಗಳಿಂದ ತಮ್ಮದಲ್ಲದೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಥವರನ್ನು ಮತ್ತೆ ಮಾತೃ ಇಲಾಖೆಗೆ ಕರೆಯಿಸಿಕೊಳ್ಳುವಂತೆಯೂ ಒತಾಯ ಕೇಳಿಬಂದಿದೆ.

ಚುನಾವಣೆಯಲ್ಲಿ ಕೊಡಗಿನ ೨ ಕ್ಷೇತ್ರಗಳಲ್ಲೂ ತಮ್ಮ ಪಕ್ಷ ಗೆಲುವು ಸಾಧಿಸುತ್ತಿದ್ದಂತೆಯೇ ಕಾಂಗ್ರೆಸಿಗರು ಅಧಿಕಾರಿಗಳ ವರ್ಗಾವಣೆ ಕೆಲಸಕ್ಕೆ ಮೊದಲು ಕೈ ಹಾಕಿದ್ದಾರೆ. ತಮಗೆ ಅನುಕೂಲ ಆಗುವ ಅಧಿಕಾರಿಗಳು, ನೌಕರರನ್ನು ಆಯಕಟ್ಟಿನ ಜಾಗಗಳಿಗೆ ತರಲು ಬೇಕಾದ ಸಿದ್ಧತೆಗಳನ್ನು ನಡೆಸಿದ್ದಾರೆ. ಜಿಲ್ಲೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಇಲ್ಲದಿದ್ದ ಸಂದರ್ಭದಲ್ಲಿ ತಮ್ಮ ಮಾತು ಕೇಳದಿದ್ದ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿದ್ದು, ವರ್ಗಾವಣೆ ಪಟ್ಟಿಯಲ್ಲಿ ಮೊದಲಿಗೆ ಇಂಥವರ ಹೆಸರು ಇದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಸಾಮಾನ್ಯವಾಗಿದೆ.

ಆಡಳಿತದ ಮೇಲೆ ಹಿಡಿತ ಇರಬೇಕಾದರೆ ಜನಪ್ರತಿನಿಧಿಗಳ ಮಾತು ಕೇಳುವ ಅಧಿಕಾರಿಗಳೇ ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವರ್ಗಾವಣೆಯ ರೂಪು ರೇಷೆ ಸಿದ್ದಪಡಿಸಲಾಗುತ್ತಿದೆ. ಇನ್ನು ಒಂದು ವರ್ಷಗಳ ಅವಧಿಯಲ್ಲಿ ಎಲ್ಲಾ ಇಲಾಖೆಗಳಲ್ಲೂ ತಮ್ಮಿಷ್ಟದ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಕಾಂಗ್ರೆಸ್ ಪಾಳಯ ಸಿದ್ಧತೆ ನಡೆಸಿದೆ. ಅಭಿವೃದ್ಧಿ ಮತ್ತು ಬದಲಾವಣೆಯ ಮಾತು ಹೇಳಿಕೊಂಡು ಜಿಲ್ಲೆಯಲ್ಲಿ ಗೆಲುವು ಸಾಧಿಸಿರುವ ಇಬ್ಬರು ಶಾಸಕರ ಮೇಲೆ ಜನಸಾಮಾನ್ಯರ ನಿರೀಕ್ಷೆ ದೊಡ್ಡದಿದೆ. ಹಾಗಾಗಿ ತಮ್ಮ ವೇಗಕ್ಕೆ ಸ್ಪಂಧಿಸುವ ಅಧಿಕಾರಿಗಳನ್ನೇ ತಮಗೆ ಬೇಕಾದಲ್ಲಿಗೆ ಕರೆತರಲು ಇಬ್ಬರು ಕೂಡ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಹಿರಿಯರು, ತಮ್ಮ ಜತೆ ಆತ್ಮೀಯರಾಗಿರುವ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳ ಸಲಹೆ ಪಡೆದುಕೊಳ್ಳುತ್ತಿದ್ದಾರೆ.

ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷ ಮಳೆಹಾನಿ ಪರಿಶೀಲನೆಗೆ ವಿರೋಧ ಪಕ್ಷದ ನಾಯಕರಾಗಿ ಆಗಮಿಸಿದ್ದ ಸಂದರ್ಭ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ರಾಷ್ಟ್ರ ಮಟ್ಟದಲ್ಲೂ ಸುದ್ದಿ ಮಾಡಿತ್ತು. ಈ ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಆಗ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಆ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದವರು ನಂತರದ ದಿನದಲ್ಲಿ ವರ್ಗ ಆಗಿದ್ದಾರೆ. ಉಳಿದವರಲ್ಲಿ ಬಹುತೇಕರೂ ಈಗಲೂ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೇಲೆಯೂ ವರ್ಗಾವಣೆ ಅಥವಾ ಇತರ ಕ್ರಮದ ತೂಗುಕತ್ತಿ ನೇತಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಎಸ್‌ಪಿಯಿಂದ ತನಿಖೆ ಆಗಿದೆ. ತನಿಖಾ ವರದಿ ಬಹಿರಂಗ ಆಗಿಲ್ಲ.

ಕೆಲವು ಅಧಿಕಾರಿಗಳು ಕೊಡಗು ತಮ್ಮ ಸ್ವಂತ ಮನೆ ಎಂಬಂತೆ ೧೦,೧೫ ವರ್ಷಗಳಿಂದ ಇಲ್ಲಿಯೇ ತಳ ಊರಿದ್ದಾರೆ. ಒಂದೇ ಸ್ಥಳದಲ್ಲಿ ಮುಂದುವರಿಯಲು ಹಲವು ರೀತಿಯ ತಂತ್ರಗಳನ್ನು ನಡೆಸಿದ್ದಾರೆ. ಇದೆಲ್ಲಾ ಇನ್ನು ಮಂದೆ ನಡೆಯುವುದಿಲ್ಲ. ಜನರ ಪರವಾಗಿ ಕೆಲಸ ಮಾಡದವರಿಗೆ ಕೊಡಗಿನಲ್ಲಿ ಜಾಗವಿಲ್ಲ. ವಿನಾ ಕಾರಣ ಜನರಿಗೆ ಸಮಸ್ಯೆ ಮಾಡುತ್ತಿರುವ ಅಧಿಕಾರಿಗಳ ಕುರಿತು ಮಾಹಿತಿಯನ್ನು ಸಾರ್ವಜನಿಕರು ನಮ್ಮ ಗಮನಕ್ಕೆ ತಂದರೆ ಅಂತಹ ಅಧಿಕಾರಿಗ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net