

ಮಂಡ್ಯ: ಮುಟ್ಟಿನ ಕಪ್ ವಿತರಣೆ ಮುಖ್ಯವಲ್ಲ, ಬದಲಿಗೆ ಅವುಗಳನ್ನು ಸದ್ಭಳಕೆ ಮಾಡುವುದು ಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.
ನಗರದ ಲಕ್ಷ್ಮೀ ಜನಾರ್ದನ ಶಾಲೆಯಲ್ಲಿ ಆಯೋಜಿಸಿದ್ದ ಮುಟ್ಟಿನ ಕಪ್ ಬಳಕೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮುಟ್ಟಿನ ಕಪ್ ವಿತರಣೆಯ ನಂತರ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ನಿರಂತರ ಅನುಸರಣೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾದ್ಯಂತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 6,000 ಹೆಣ್ಣು ಮಕ್ಕಳಿಗೆ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ಅನುದಾನದಡಿ ಮುಟ್ಟಿನ ಕಪ್ ವಿತರಿಸಲು ಉದ್ದೇಶಿಸಲಾಗಿದೆ. ಆ.15ರೊಳಗೆ ಮುಟ್ಟಿನ ಕಪ್ ಅನ್ನು ವಿತರಣೆ ಮಾಡಲಾಗುವುದು. ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ವೈದ್ಯರ ಸಂಘದ ಸಹಕಾರದೊಂದಿಗೆ ಪ್ರೌಢಶಾಲೆಗಳಲ್ಲಿ ಮುಟ್ಟಿನ ಕಪ್ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ನಂತರದ ದಿನಗಳಲ್ಲಿ ವಿಜ್ಞಾನ ಶಿಕ್ಷಕರು ಅಥವಾ ಮಹಿಳಾ ಶಿಕ್ಷಕರು ಈ ಬಗ್ಗೆ ನಿರಂತರ ಅರಿವು ಮೂಡಿಸಬೇಕು. ಪ್ರತಿ ಶಾಲೆಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಕ ಮಾಡಿ ಮುಟ್ಟಿನ ಕಪ್ ಬಳಕೆಯ ಬಗ್ಗೆ ಎದುರಾಗುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಸಮಸ್ಯೆ ಪರಿಹರಿಸಲು ತಿಳಿಸಿದರು.
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ವೈದರ ಸಂಘದ ಜಿಲ್ಲಾಧ್ಯಕ್ಷ ಡಾ.ಆರ್.ಮನೋಹರ್, ಡಾ.ಶಿಲ್ಪಾ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಧಿಕಾರಿ ಮಹದೇವ್ ಇತರರಿದ್ದರು.