

ಔರಾದ್: ಕಾರ್ಮಿಕರು ತಮ್ಮ ಹೆಸರನ್ನು ಸಂಬಂಧಿಸಿದ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳದಿದ್ದರೆ ಸರ್ಕಾರದ ಸೌಲಭ್ಯ ಪಡೆಯುವುದು ಕಷ್ಟವಾಗುತ್ತದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್‌ಸಾಬ್ ಯಾದವಾಡ ಹೇಳಿದರು.
ಪಟ್ಟಣದ ಪಪಂ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾನೂನು, ಯೋಜನೆಗಳ ಕುರಿತು ಏರ್ಪಡಿಸಿದ್ದ ತಾಲೂಕು ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಯೋಜನೆಗಳ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಅರ್ಹ ಕಾರ್ಮಿಕರು ತಪ್ಪದೇ ನೋಂದಣಿ ಮಾಡಿಸಿ ಜತೆಯಲ್ಲಿರುವ ಕಾರ್ಮಿಕರಿಗೂ ನೋಂದಣಿ ಮಾಡಿಸಲು ತಿಳಿಸಿ ಎಂದು ಹೇಳಿದರು.
ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಬಹಳ ಪ್ರಮುಖವಾಗಿದ್ದು, ಇಲಾಖೆಯ ಸೌಲಭ್ಯ, ಯೋಜನೆ, ಕಾರ್ಮಿಕ ಕಾನೂನುಗಳ ಕುರಿತು ಮಾಹಿತಿ ತಿಳಿದುಕೊಳ್ಳುವುದು ಅಗತ್ಯವೆಂದು ಹೇಳಿದರು.
ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಅರ್ಜುನ ಸೀತಾಳಗೇರಾ, ತಾಪಂ ಇಒ ಮಾಣಿಕರಾವ ಪಾಟೀಲ್, ಕಾರ್ಮಿಕ ನಿರೀಕ್ಷಕ ರಾಹುಲ ರತ್ನಾಪುರೆ ಮಾತನಾಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಎಲ್.ಕುಳಲಿ, ಜ್ಞಾನೇಶ್ವರ ಮಾಳಗಿ, ಸಂದೀಪ ಮೇತ್ರೆ, ಶಿವಾನಂದ ಹುಲ್ಲೇನವರ, ಬಾಲಾಜಿ ಕಂಬಾರ, ಶ್ರೀಧರ, ಅರ್ಜುನ ಇತರರಿದ್ದರು.