ನಾಗರಿಕ ಸೇವೆಗಳಿಂದ ಸಾಧ್ಯ ಸಮಾಜದ ಸಬಲೀಕರಣ

Kakkunje 1
Published on

ಸಾಹಿತಿ ಅರವಿಂದ ಚೊಕ್ಕಾಡಿ ಅನಿಸಿಕೆ

ಕಕ್ಕುಂಜೆ ಚರ್ಚ್​ನಲ್ಲಿ ಕಾರ್ಯಾಗಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರಾವಳಿ ಭಾಗದ ಜನರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಕಡಿಮೆ ಅಭಿರುಚಿ ಹೊಂದಿದ್ದು ಉತ್ತರ ಭಾರತದವರು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಹೀಗಾಗಿ ಕರಾವಳಿಯ ಯುವಜನರೂ ಸಹ ಹೆಚ್ಚಿನ ಪ್ರಮಾಣದಲ್ಲಿ ನಾಗರಿಕ ಸೇವೆಗಳಿಗೆ ಸೇರುವುದರಿಂದ ಸಮಾಜದ ಸಬಲೀಕರಣ ಸಾಧ್ಯವಿದೆ ಎಂದು ಕನ್ನಡದ ಚಿಂತಕ, ಸಾಹಿತಿ ಅರವಿಂದ ಚೊಕ್ಕಾಡಿ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಆಸಕ್ತ ವಿದ್ಯಾರ್ಥಿಗಳಿಗಾಗಿ ಭಾನುವಾರ (ನ.2) ಆಯೋಜಿಸಿದ್ದ ನಾಗರಿಕ ಸೇವೆಗಳ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.

ಕಠಿಣ ಪರಿಶ್ರಮ ಅಗತ್ಯ

Kakkunje 2
ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್​ ಐಸಾಕ್​ ಲೋಬೊ ಮಾತನಾಡಿ, ಸಾಧನೆಯ ಕನಸು ಸ್ಪಷ್ಟವಾಗಿದ್ದರೆ, ಕಠಿಣ ಪರಿಶ್ರಮ ಮಾಡಿದರೆ ನಾಗರಿಕ ಸೇವೆಯಲ್ಲಿ ಯಶಸ್ಸು ಕಾಣಲು ಸಾಧ್ಯ. ಪರಿಶ್ರಮಕ್ಕೆ ಸೂಕ್ತ ಗೆಲುವು ಲಭಿಸುವ ತನಕ ಸೋಲು ಒಪ್ಪಿಕೊಳ್ಳದೆ ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ಮನೆಯಲ್ಲಿ ಪಾಲಕರ ಉತ್ತೇಜನವೂ ಸಹ ಅಷ್ಟೇ ಅಗತ್ಯ. ಮುಂದಿನ ದಿನಗಳಲ್ಲಿ ನಾಗರಿಕ ಸೇವೆಗಳ ಕುರಿತು ಧರ್ಮಪ್ರಾಂತ್ಯದ ಮೂಲಕ ವಿದ್ಯಾರ್ಥಿಗಳಿಗೆ ಇನ್ನಷ್ಟು ತರಬೇತಿ ನೀಡಲಾಗುವುದು ಎಂದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ನಾಗರಿಕ ಸೇವಾ ಪರೀಕ್ಷೆ ಬರೆದು ತರಬೇತಿ ಪಡೆಯುತ್ತಿರುವ ಜಾಸ್ಮಿನ್​ ಜೆನಿಫರ್​ ಲೋಬೊ ಬಂಟ್ವಾಳ ಮತ್ತು ಆಶೀಶ್​ ಕುಲದೀಪ್​ ಆಳ್ವಾ ಮೂಡುಬೆಳ್ಳೆ ಅವರು ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

'ಪರಿಚಯ ಸಂಸ್ಥೆ' ಪಾಂಬೂರಿನ ಪ್ರಕಾಶ್​ ನೊರೊನ್ಹಾ ಅತಿಥಿ ಪರಿಚಯ ಮಾಡಿದರು. ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್​ ಡೆಸಾ ಕಾರ್ಯಕ್ರಮ ನಿರೂಪಿಸಿದರು.

ನಾಗರಿಕ ಸೇವೆಯ ಬಯಕೆ ಯಾವುದೇ ಒತ್ತಾಯದಿಂದ ಬರದೆ ಸ್ವಇಚ್ಛೆಯಿದ್ದಾಗ ಸಮಾಜದಲ್ಲಿ ಉತ್ತಮ ಸೇವೆ ನೀಡಲು ಸಾಧ್ಯ. ಅಧಿಕಾರ ಬಳಸಿಕೊಂಡು ಸಮಾಜಕ್ಕೆ ಉಪಯೋಗವಾಗುವಂತಹ ಹೆಚ್ಚಿನ ಸೇವೆ ನೀಡಲು ಈ ಹುದ್ದೆಯಿಂದ ಸಾಧ್ಯವಿದೆ. ಯುವಜನತೆ ಅನಗತ್ಯ ವಿಚಾರಗಳಿಂದ ಹೊರಬಂದು ಇಂತಹ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ನಾಡಿನ ಕೀರ್ತಿ ಹೆಚ್ಚಿಸಬೇಕು.| ಅರವಿಂದ ಚೊಕ್ಕಾಡಿ. ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net