ಭ್ರೂಣ ಹತ್ಯೆಯಿಂದ ಮಂಡ್ಯಕ್ಕೆ ಕಳಂಕ: ಮಧ್ಯಸ್ಥಿಕೆ ಕೇಂದ್ರದ ಅಧ್ಯಕ್ಷ ಕೆ.ಸೋಮಶೇಖರ್ ಬೇಸರ

Training workshop Mandya
Published on

ಮಂಡ್ಯ: ಮಂಡ್ಯದಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಿಂದ ಜಿಲ್ಲೆಗೆ ಕಳಂಕ ಬಂದಿದೆ. ಇದನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಬಾಲ್ಯವಿವಾಹ ನಡೆಯುವುದು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098/112 ಗೆ ಕರೆ ಮಾಡಿ ತಿಳಿಸಬೇಕು ಎಂದು ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರೂ ಆದ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ ಅಧ್ಯಕ್ಷ ಕೆ.ಸೋಮಶೇಖರ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ನಿಷೇಧ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ಹಾಗೂ ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ(ಫೋಕ್ಸೋ)-2012 ಕುರಿತು ತರಬೇತಿ ಕಾರ್ಯಾಗಾರ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ಮುಂತಾದ ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕಲು ಮೊದಲು ಜ್ಞಾನ ಮತ್ತು ವಿದ್ಯೆ ಅವಶ್ಯಕ. ಯಾವ ವ್ಯಕ್ತಿಯೂ ಸಹ ಹುಟ್ಟಿನಿಂದ ಆರೋಪಿ ಆಗಿರಲ್ಲ. ಕಾನೂನಿನ ಅರಿವು ಇಲ್ಲದವರು ಮಾತ್ರ ತಪ್ಪನ್ನು ಎಸಗಲು ಸಾಧ್ಯ. ಸಂವಿಧಾನದ ಅರಿವು ಇದ್ದಾಗ ಯಾರೂ ಕೂಡ ಅಪರಾಧವನ್ನು ಎಸೆಗಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಎಲ್ಲಾ ವಿಧಿಗಳನ್ನು ಅರ್ಥ ಮಾಡಿಕೊಂಡು ನಿಮ್ಮ ಜ್ಞಾನವನ್ನು ಹರಿತಗೊಳಿಸಿಕೊಳ್ಳಬೇಕು ಎಂದರು.

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, 21 ವರ್ಷದೊಳಗಿನ ಹುಡುಗ ಹಾಗೂ 18 ವರ್ಷದೊಳಗಿನ ಹುಡುಗಿಗೆ ಮದುವೆ ಮಾಡುವುದರಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ಬಾಲ್ಯ ವಿವಾಹದಿಂದ ಮಕ್ಕಳು ಶಿಕ್ಷಣ ಹಾಗೂ ಬಾಲ್ಯಾವಸ್ಥೆಯಿಂದ ವಂಚಿತರಾಗುತ್ತಾರೆ. ಬಾಲ್ಯವಿವಾಹವು ಪುರಾತನ ಕಾಲದಿಂದಲೂ ಆಚರಣೆಯಲ್ಲಿದ್ದು, ಈಗಲೂ ಸಮಾಜದ ಎಲ್ಲ ವರ್ಗಗಳಲ್ಲಿ ಕಂಡು ಬರುತ್ತದೆ. ಇದು ಒಂದು ಅನಿಷ್ಟ ಪದ್ದತಿ ಹಾಗೂ ಸಾಮಾಜಿಕ ಪಿಡುಗು ಎಂದು ಗುರುತಿಸಿ ಬಾಲ್ಯವಿವಾಹವನ್ನು ನಿಷೇಧಿಸಲು ಕೇಂದ್ರ ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ -2006 ಹಾಗೂ ರಾಜ್ಯ ಸರ್ಕಾರವು ಬಾಲ್ಯ ವಿವಾಹ ನಿಷೇಧ(ಕರ್ನಾಟಕ )ನಿಯಮಾವಳಿಗಳು- 2016 ರಂದು ಜಾರಿಗೆ ಬಂದಿತು ಎಂದು ವಿವರಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಮಾತನಾಡಿ, ಯಾವುದೇ ಮಗುವು ಭ್ರೂಣದಿಂದಲೇ ಜೀವಿಸುವ ಹಕ್ಕನ್ನು ಪಡೆದುಕೊಂಡಿರುತ್ತದೆ. ಆದ್ದರಿಂದ ಹೆಣ್ಣಾಗಲಿ ಅಥವಾ ಗಂಡಾಗಲಿ ಕಾರಣ ಯಾವುದೇ ಇದ್ದರೂ, ಮಗುವಿನ ಹತ್ಯೆಯು ದೊಡ್ಡ ಅಪರಾಧವಾಗಿದೆ. ಮಕ್ಕಳೆಲ್ಲರೂ ಸಮಾನರಾಗಿದ್ದು, ಯಾವುದೇ ಭೇದ ಭಾವವೀರಬಾರದು. ಅವರಿಗೆ ಸಮಾನ ಶಿಕ್ಷಣ ಕೊಡಿಸುವ ಮೂಲಕ ದೇಶದ ಉತ್ತಮ ಪ್ರಜೆಯನ್ನಾಗಿ ಮಾಡಬೇಕು. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಜಿಪಂನಡಿ ಬರುವ ಗ್ರಾಮ ಕಾವಲು ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಕಾವಲು ಸಮಿತಿಯು ಬಲವರ್ಧನೆಯಾಗಬೇಕು ಎಂದರು.

ಕಾರ್ಯಾಗಾರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಬೃಂಗೇಶ್, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ.ಆನಂದ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಬೆಂಗಳೂರು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಬಿ.ಎಚ್.ನಿಶ್ಚಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ರಾಜಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಎಸ್.ರಶ್ಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net