

ಮಂಡ್ಯ: ಕೀಳರಿಮೆ, ನಕಾರಾತ್ಮಕ ಚಿಂತನೆಯಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಗುರಿ ಇಟ್ಟುಕೊಂಡು ಶ್ರಮ ವಹಿಸಿದಾಗ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಕೃಷಿಕ್ ಸರ್ವೋದಯ ಟ್ರಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಎಎಸ್ ಮತ್ತು ಗ್ರೂಪ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗುರಿ ಎಷ್ಟು ಮುಖ್ಯವೋ ದಾರಿಯೂ ಅಷ್ಟೆ ಮುಖ್ಯ. ಒಳ್ಳೆಯ ಸಮಯದಲ್ಲಿ ಗುರಿ ಹಾಕಿಕೊಳ್ಳಬೇಕು. ಐಎಎಸ್, ಕೆಎಎಸ್ ಮಾಡುತ್ತೇನೆಂಬ ಗುರಿ ಹೊಂದಿದ್ದರೆ ಮಾತ್ರ, ಅದನ್ನು ಸುಲಭವಾಗಿ ಸಾಧಿಸಲು ಸಾಧ್ಯ. ಇಲ್ಲದಿದ್ದರೆ ಏನನ್ನೂ ಮಾಡಲಾಗದು ಎಂದು ಹೇಳಿದರು.
ನಾನು ಆಂಗ್ಲ ಮಾಧ್ಯಮದಲ್ಲಿ ಓದಿದವನಲ್ಲ. ಸರ್ಕಾರಿ ಶಾಲೆ, ಕಾಲೇಜುಗಳಲ್ಲೇ ವ್ಯಾಸಂಗ ಮಾಡಿದ್ದೇನೆ. ಇಡೀ ಜೀವನವನ್ನು ಬಿಸಿಎಂ ಹಾಸ್ಟೆಲ್‌ನಲ್ಲೇ ಕಳೆದಿದ್ದೇನೆ. ಸಾಧನೆಗೆ ಬಡತನ ಅಡ್ಡಿಯಲ್ಲ. ಬಡವರಾಗಿ ಹುಟ್ಟಿದ್ದರೆ ಬದುಕಿನ ಬಗ್ಗೆ ಛಲ, ಸಾಧನೆ ಬರುತ್ತದೆ. ಬಡವರಾಗಿ ಹುಟ್ಟಿರುವುದು ತಪ್ಪಲ್ಲ, ಬಡವರಾಗಿ ಬದುಕುವುದು ಸರಿಯಲ್ಲ, ಸಾಧನೆ ಮಾಡಿ ಮೇಲೆ ಬರಬೇಕು. ನಿಮ್ಮೊಳಗೆ ಯಾವ ಶಕ್ತಿ ಎಂಬುದು ತೋರಿಸಿಕೊಳ್ಳಬೇಕು ಎಂದರೆ ಅದು ಬಡರಾಗಿ ಹುಟ್ಟಿದರೆ ಮಾತ್ರ ಸಾಧ್ಯ. ಬಡವರಾಗಿ ಹುಟ್ಟಿದವರು ನಿಜವಾಗಲೂ ನಮ್ಮ ಶಕ್ತಿ ಏನೆಂಬುದನ್ನು ತೋರಿಸುವಷ್ಟು ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು.
ಕಾಲ ಎಲ್ಲದ್ದಕ್ಕೂ ಕಾಯುವುದಿಲ್ಲ. ಕಾಲಕ್ಕೆ ತಕ್ಕಂತೆ ನಾವು ಸಾಗಬೇಕು. ಅದಕ್ಕೆ ಸರಿಯಾದ ದಾರಿಯನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ನಾವು ಕೆಟ್ಟ ದಾರಿಯಲ್ಲಿ ಹೋಗಬೇಕೆಂದಾದರೆ ಅದಕ್ಕೆ ನೂರು ದಾರಿಗಳಿರುತ್ತವೆ. ಒಂದೇ ಒಂದು ಮಾತ್ರ ಒಳ್ಳೆಯ ದಾರಿ ಇರುತ್ತದೆ. ಅದರಲ್ಲಿ ಸಾಗಿ ಮತ್ತೆ ವಾಪಸು ಬರುವುದು ಸರಿಯಲ್ಲ. ಅದೇ ರೀತಿ ಕೆಟ್ಟ ದಾರಿಯಲ್ಲಿ ಸಾಗಿ ನಂತರ ಬಂದು ಒಳ್ಳೆಯ ದಾರಿ ಹಿಡಿಯುತ್ತೇನೆಂದರೆ ಅಷ್ಟರಲ್ಲಾಗಲೇ ಸಮಯ ವ್ಯರ್ಥವಾಗಿರುತ್ತದೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ಸ್ಪರ್ಧಿಗಳಿಗೆ ಕಿವಿಮಾತು ಹೇಳಿದ ಅವರು, ಸಮಾಜದಲ್ಲಿ ಸಾಧನೆ ಮಾಡಿರುವವರನ್ನು ಆದರ್ಶ ವ್ಯಕ್ತಿಗಳನ್ನಾಗಿಟ್ಟುಕೊಳ್ಳುವುದರ ಜತೆಗೆ ನಮ್ಮ ಪಾಲಕರನ್ನು ಆದರ್ಶರಾಗಿಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು. ಆಗ ನಮಗೆ ಸುಲಭವಾಗಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಕೃಷಿಕ್ ಸರ್ವೋದಯ ಟ್ರಸ್ಟ್ ಅಧ್ಯಕ್ಷ ಟಿ.ತಿಮ್ಮೇಗೌಡ, ಜಂಟಿ ಕಾರ್ಯದರ್ಶಿ ಡಾ.ಎಸ್.ಟಿ.ರಾಮಚಂದ್ರು, ಖಜಾಂಚಿ ಡಾ.ಕೆ.ಬಿ.ಬೋರಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಹೇಮಚಂದ್ರ, ಎಚ್.ಡಿ.ವಿಶ್ವನಾಥ್, ಮುಖ್ಯ ಸಂಚಾಲಕರಾದ ಎಸ್.ಲೋಕೇಶ್, ಸಿ.ಎಲ್. ನಂಜರಾಜು, ವ್ಯವಸ್ಥಾಪಕರಾದ ಲಕ್ಷ್ಮಣ್, ಸಹಾಯಕ ವ್ಯವಸ್ಥಾಪಕ ಶಿವಲಿಂಗಯ್ಯ ಇತರರಿದ್ದರು.