ಕಳಪೆ ಬಿತ್ತನೆ ವಿತರಿಸಿದರೆ ಶಿಸ್ತು ಕ್ರಮ: ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ

1 (1)
Published on

ಮಂಡ್ಯ: ರೈತರಿಗೆ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವುದು ಅಥವಾ ಸರ್ಕಾರದ ನಿಯಮ ಉಲ್ಲಂಘಿಸಿದರೆ ಅಗತ್ಯ ವಸ್ತುಗಳ ಕಾಯ್ದೆ-1955, ಬೀಜ ಅಧಿನಿಯಮ-1966, ಬೀಜ ನಿಯಮಗಳು-1968 ಮತ್ತು ಬೀಜಗಳ ನಿಯಂತ್ರಣ ಆದೇಶ-1983 ರನ್ವಯ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಖಾಸಗಿ ಬಿತ್ತನೆ ಬೀಜ ಮಾರಾಟಗಾರರಿಗೆ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತರಬೇತಿ ಹಾಗೂ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕು. ಕೃಷಿ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಬೇಕು. ಪ್ರಮುಖವಾಗಿ ಬಿತ್ತನೆ ಬೀಜ ಖರೀದಿಸಿದಾಗ ನಿಗದಿತ ನಮೂನೆಯಲ್ಲಿ ಬಿಲ್ ಅನ್ನು ರೈತರ ಸಹಿಯೊಂದಿಗೆ ನೀಡಬೇಕು. ಇತ್ತ ರೈತರು ಬಿಲ್ ಹಾಗೂ ಬಿತ್ತನೆ ಬೀಜದ ಬ್ಯಾಗ್ ಮೇಲೆ ಇರುವ ಟ್ಯಾಗ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ಚಟುವಟಿಕೆಗೆ ಪೂರಕವಾಗಿ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ವಿವಿಧ ಸಾಮಗ್ರಿಗಳನ್ನು ಮಾರಾಟಗಾರರು ರೈತರಿಗೆ ಪೂರೈಕೆ ಮಾಡುವಾಗ ಸರ್ಕಾರದ ನಿಯಮ ಪಾಲಿಸಬೇಕು. ಅನುಮೋದಿತ ಬಿತ್ತನೆ ಬೀಜವನ್ನು ಮಾತ್ರ ಮಾರಾಟ ಮಾಡಬೇಕು. ಜಿಲ್ಲೆಯಲ್ಲಿ ರೈತರು ಖಾಸಗಿ ಸಂಸ್ಥೆಗಳ ಭತ್ತದ ತಳಿಗಳನ್ನು ಬಿತ್ತನೆಗಾಗಿ ಬಳಸುವುದು ಪ್ರಚಲಿತವಾಗಿದೆ. ಆದ್ದರಿಂದ ಜಿಲ್ಲೆಗೆ ಶಿಫಾರಸು ಮಾಡಿರುವ ಹಾಗೂ ಅನುಮೋದನೆಯಾಗಿರುವ ತಳಿಗಳನ್ನು/ ಹೈಬ್ರಿಡ್ ಭತ್ತದ ಬೀಜಗಳನ್ನು ಮಾತ್ರ ಮಾರಾಟ ಮಾಡುವಂತೆ ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 1,95,000 ಹೆಕ್ಟೇರ್‌ನಲ್ಲಿ ಕಬ್ಬು ಹಾಗೂ ಭತ್ತ ಬೆಳೆಯಲಾಗುತ್ತದೆ. ಕೃಷಿ ಇಲಾಖೆ ಅಧಿಕಾರಿಗಳು, ಬಿತ್ತನೆ ಬೀಜ ಮಾರಾಟಗಾರರು ಸಮನ್ವಯವಾಗಿ ಕಾರ್ಯನಿರ್ವಹಿಸಿದರೆ ರೈತರಿಂದ ಯಾವುದೇ ದೂರು ಬರುವುದಿಲ್ಲ. ಆದ್ದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ರೈತರ ವಿಶ್ವಾಸ ಗಳಿಸಿ ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಮೈಸೂರು ವಿಭಾಗದ ಜಾಗೃತ ಕೋಶದ ಜಂಟಿ ನಿರ್ದೇಶಕಿ ಸುಜಾತಾ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಮಾಲತಿ, ಪಾಂಡವಪುರ ವಿಭಾಗದ ಸಹಾಯಕ ನಿರ್ದೇಶಕಿ ಮಮತಾ, ಕೆ.ವಿ.ಕೆ ಮುಖ್ಯಸ್ಥ ಡಾ.ನರೇಶ್, ವಿ.ಸಿ ಫಾರ್ಮ್‌ನ ವಲಯ ಕೃಷಿ ಸಂಶೋಧನಾ ನಿರ್ದೇಶಕ ಡಾ.ಶಿವಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net