ಸೌಲಭ್ಯ ಪಡೆದ ಆರ್ಥಿಕವಾಗಿ ಸಬಲರಾಗಿ: ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಕಿವಿಮಾತು

Training workshop for women entrepreneurs Mandya
Published on

ಮಂಡ್ಯ: ಮಹಿಳೆಯರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನೆ ಪಡೆದು ಸ್ವಾವಲಂಬಿ ಜೀವನ ನಡೆಸುವ ಜತೆಗೆ ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮೃದ್ಧಿ ಸಂತೃಪ್ತಿ ಮಹಿಳಾ ಉದ್ಯಮಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಉದ್ಯೋಗವನ್ನು ಸೃಷ್ಟಿ ಮಾಡುವ ಹಲವಾರು ಸ್ವಉದ್ಯೋಗ ಉಪಕರಣ ಸೆಲ್ಕೋ ಸಂಸ್ಥೆಯಲ್ಲಿ ಲಭ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಹಲವಾರು ರೀತಿಯ ಸಹಾಯಧನ ಪಡೆಯುವ ಅವಕಾಶಗಳಿವೆ. ಇದನ್ನು ಮಹಿಳೆಯರು ಬಳಕೆ ಮಾಡಿಕೊಳ್ಳಬೇಕು ಎಂದರು.

ಎಷ್ಟೋ ಹೆಣ್ಣುಮಕ್ಕಳು ಜೀವನವನ್ನು ನಡೆಸಲು ಬಹಳಷ್ಟು ಕಷ್ಟಪಡುತ್ತಾರೆ. ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿರುವ ಹೆಣ್ಣು ಮಕ್ಕಳು ಜೀವನದ ಮೇಲೆ ಆಸಕ್ತಿಯನ್ನೆ ಕಳೆದುಕೊಂಡಿರುತ್ತಾರೆ. ಅಂತಹವರಿಗೆ ಮನೆಯ ಜವಾಬ್ದಾರಿ ನಿರ್ವಹಿಸಲು ಉತ್ತಮವಾದ ಅವಕಾಶಗಳಿವೆ. ಈ ಕಾರ್ಯಾಗಾರವನ್ನು ಮಹಿಳೆಯರಿಗಾಗಿಯೇ ಆಯೋಜಿಸಲಾಗಿದೆ. ಒಬ್ಬ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಹೇಳಿದರು.

ಸೆಲ್ಕೋ ಸಂಸ್ಥೆಯ ಡಿಜಿಎಂ ಗುರುಪ್ರಕಾಶ ಶೆಟ್ಟಿ ಮಾತನಾಡಿ, ಸಂಸ್ಥೆಯಲ್ಲಿ ಹಾಲು ಕರೆಯುವ ಯಂತ್ರ, ಕುಲುಮೆ, ಬೆಣ್ಣೆ ಕಡೆಯುವುದು, ಹೊಲಿಗೆ, ರೊಟ್ಟಿ ತಯಾರಿಕೆ, ಶಿಥಿಲಿಕರಣ, ಕಬ್ಬಿನಹಾಲು ತೆಗೆಯುವುದು, ತರಕಾರಿ ಕತ್ತರಿಸುವುದು, ಹೀಗೆ ಹೈನುಗಾರಿಕೆ, ಕೃಷಿ, ಆಹಾರ ಸಂಸ್ಕಾರಣ ಘಟಕ, ಜೀವನೋಪಾಯ ಘಟಕ, ಅಂಗವಿಕಲರಿಗೆ ಸಂಬಂಧಿಸಿದ ಸೌರ ಉಪಕರಣಗಳಿವೆ ಎಂದರು.

ಎನ್‌ಆರ್‌ಎಲ್ಎಂ ಯೋಜನಾ ನಿರ್ದೇಶಕ ಕೆ.ಪಿ.ಸಂಜೀವಪ್ಪ, ಜಿಲ್ಲಾ ನಬಾರ್ಡ್ ಅಭಿವೃದ್ಧಿ ವ್ಯವಸ್ಥಾಪಕಿ ಬಿ.ವಿ.ಹರ್ಷಿತಾ, ಜಿಲ್ಲಾ ನಲ್ಮ್ ಕೌಶಲಾಭಿವೃದ್ಧಿ ಅಧಿಕಾರಿ ಆರ್.ನಾಗಾನಂದ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ವವಸ್ಥಾಪಕ ಸಲೀಂರಾಜು, ಡಿಆರ್‌ಪಿ ಪಿಎಂಂ ಯೋಜನೆಯ ಎಚ್.ವಿ.ಅಶ್ವಿನ್‌ಕುಮಾರ್, ಸೆಲ್ಕೋ ಸಂಸ್ಥೆ ಜಿಲ್ಲಾ ಶಾಖೆ ವ್ಯವಸ್ಥಾಪಕ ಎಚ್.ಎನ್.ಅಭಿಲಾಷ್ ಇತರರಿದ್ದರು. ಕಾರ್ಯಾಗಾರದಲ್ಲಿ 300ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net