

ಮಂಡ್ಯ: ಕಂದಾಯ ಇಲಾಖೆಯ ಸಿಬ್ಬಂದಿ ಬಹಳ ಶಿಸ್ತಿನಿಂದ ಕರ್ತವ್ಯ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾ ತರಬೇತಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳಿಗೆ ಜು.28ರವರೆಗೆ ಆಯೋಜಿಸಿರುವ ವೃತ್ತಿ ಬುನಾದಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಬೇರೆ ಇಲಾಖೆಗಳ ಅಧಿಕಾರಿಗಳಿಗಿಂತ ಹೆಚ್ಚಿನ ಗೌರವವನ್ನು ಜನಸಾಮಾನ್ಯರು ನೀಡುತ್ತಾರೆ. ಆದ್ದರಿಂದ ಕಂದಾಯ ಇಲಾಖೆಯನ್ನ ಮಾತೃ ಇಲಾಖೆ ಎನ್ನಲಾಗುತ್ತದೆ ಎಂದರು.
ಗ್ರಾಮಗಳಲ್ಲಿ ಎಲ್ಲರೂ ಈ ಇಲಾಖೆಯನ್ನು ವಿಶೇಷವಾಗಿ ನೋಡತ್ತಾರೆ. ಕಂದಾಯ ಇಲಾಖೆಗೆ ಅದರದ್ದೇ ಆದ ಪ್ರಾಮಾಣಿಕವಾದ ಮತ್ತು ಪವಿತ್ರವಾದ ಮಹತ್ವವಿದ್ದು, ಇಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದರೆ ನಿಮಗೆ ಇದರಲ್ಲಿ ಅಭಿಮಾನ ಮತ್ತು ಹೆಮ್ಮೆ ಇರಬೇಕು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕಾದರೆ ಯಾವುದೇ ಅಮಿಷಕ್ಕು ಒಳಗಾಗದೆ ಸಮಗ್ರತೆ ಮತ್ತು ನಿಷ್ಠೆಯಿಂದ ಇರಬೇಕು. ಆಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕಂದಾಯ ಇಲಾಖೆಯ ಕಾರ್ಯಚಟುವಟಿಕೆಯನ್ನು ತಹಸೀಲ್ದಾರ್, ಅಪರ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿ ಹೀಗೆ ಹಲವು ಮೇಲ್ಮಟ್ಟದ ಅಧಿಕಾರಿಗಳು ಗಮನಿಸುತ್ತಾರೆ. ಪ್ರಮುಖವಾಗಿ ಇಲಾಖೆಗೆ ಹೆಚ್ಚಾಗಿ ರೈತರು, ಬಡವರು ತಮ್ಮ ಕೆಲಸಕ್ಕಾಗಿ ಬರುತ್ತಾರೆ. ಆದ್ದರಿಂದ ಅವರೊಂದಿಗೆ ವಿನಮ್ರತೆ ಹಾಗೂ ತಾಳ್ಮೆಯಿಂದ ವರ್ತಿಸಬೇಕು. ನಾವು ಕೆಲಸ ನಿರ್ವಹಿಸುತ್ತಿರುವುದು ಜನ ಸಾಮಾನ್ಯರ ಮಧ್ಯೆ ಆಗಿರುವುದರಿಂದ ಯಾವುದೇ ಹಸ್ತಕ್ಷೇಪವಿಲ್ಲದೆ ಕರ್ತವ್ಯ ಮಾಡಬೇಕು. ಜನರ ಸೇವೆಯೇ ಜನಾರ್ದನನ ಸೇವೆ ಎಂಬುದು ಯಾವಾಗಲೂ ನೆನಪಿನಲ್ಲಿರಲಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಎಚ್.ರಾಜಲಕ್ಷ್ಮೀ, ಉಪ ಪ್ರಾಂಶುಪಾಲ ಎ.ಎನ್.ಆನಂದ್, ಬೋಧಕ ಎಸ್.ನಾಗೇಶ್ ಇತರರಿದ್ದರು.