

ರಾಯಚೂರು: ಬಜೆಟ್ ಹೇಗೆ ರೂಪಿಸಲಾಗುತ್ತಿದೆ. ಯಾವ ಇಲಾಖೆಗೆ ಹೇಗೆ ಅನುದಾನ ಮೀಸಲಿಡಲಾಗುತ್ತದೆ. ಇಲಾಖೆಗಳ ಕಾರ್ಯನಿರ್ವಹಣೆ ಕುರಿತಂತೆ ಫೆ.9ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಎಲ್ಲ ಶಾಸಕರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ನಗರದ ಹೊರವಲಯದ ಯರಮರಸ್ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಫೆ.12ರಿಂದ 23ರವರೆಗೆ ಬಜೆಟ್ ಅವೇಶನ ನಡೆಯಲಿದೆ. ಫೆ.16ರಂದು ಮುಖ್ಯಮಂತ್ರಿ ಬಜೆಟ್ ಮಂಡನೆ ಮಾಡಲಿದ್ದಾರೆ. ಶಾಸಕರ ಜತೆಗೆ ಪತ್ರಕರ್ತರಿಗೂ ಪ್ರತ್ಯೇಕವಾಗಿ ತರಬೇತಿ ಕಾರ್ಯಾಗಾರ ನಡೆಸಲಾಗುವುದು ಎಂದರು.
ವಿಧಾನಸಭೆಯನ್ನು ಜನರ ಹತ್ತಿರಕ್ಕೆ ತೆಗೆದುಕೊಂಡು ಹೋಗಬೇಕು. ವಿಧಾನಸಭೆ ನನಗೆ ಎಟಕುವಂತದ್ದಲ್ಲ, ನಾನು ನೋಡಲು ಸಾಧ್ಯವಿಲ್ಲ ಎನ್ನುವ ಮನಸ್ಸು ಜನರಿಗೆ ಬರಬಾರದು. ಸುರಕ್ಷತೆ ದೃಷ್ಟಿಯಿಂದ ಯಾರು ಬರುತ್ತಾರೆ, ಹೋಗುತ್ತಾರೆ ಎನ್ನುವ ಮಾಹಿತಿ ಬೇಕು ಎನ್ನುವ ಕಾರಣಕ್ಕೆ ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ರಕ್ಷಣಾ ವ್ಯವಸ್ಥೆಗೆ ಸೂಚಿಸಲಾಗಿದೆ.
ತಲಾ ಒಂದು ದಿನ ಕೂಲಿ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕರು, ಕ್ರೀಡಾಪಟುಗಳು, ಪೌರ ಕಾರ್ಮಿರಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಅವೇಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅವೇಶನ ವೀಕ್ಷಣೆಗೆ ಬರುವ ವಿದ್ಯಾರ್ಥಿಗಳನ್ನು ಹೊರಗಡೆ ಸಾಲಿನಲ್ಲಿ ನಿಲ್ಲಿಸದೆ ಒಳಗಡೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ.
ಶಾಸಕರನ್ನು ಜನಸಾಮಾನ್ಯರು ಗೆಲ್ಲಿಸಿ ವಿಧಾನಸಭೆಗೆ ಕಳಿಸಿದ್ದಾರೆ. ಅವರು ಅವೇಶನಕ್ಕೆ ಸರಿಯಾದ ಸಮಯಕ್ಕೆ ಬಂದು ಕೊನೆವರೆಗೂ ಇದ್ದು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಬೇರೆಲ್ಲ ಕೆಲಸ ಕಾರ್ಯಗಳಿದ್ದರೂ ಅವೇಶನದಲ್ಲಿ ಪಾಲ್ಗೊಳ್ಳುವುದಕ್ಕೆ ಶಾಸಕರು ಮೊದಲ ಆದ್ಯತೆ ನೀಡಬೇಕು.
ನಾನು ಸಭಾಧ್ಯಕ್ಷನಾಗಿದ್ದೇನೆ. ನನಗೆ ಆಡಳಿತ ಪಕ್ಷ, ಪ್ರತಿಪಕ್ಷವೂ ಒಂದೇ ಆಗಿದೆ. ಎಲ್ಲ ಶಾಸಕರನ್ನು ಸಮಾನತೆಯಿಂದ ನೋಡಿಕೊಂಡು ಹೋಗುವುದರ ಜತೆಗೆ ಸದನದಲ್ಲಿ ಸೌಹಾರ್ದತೆ ನಿರ್ಮಾಣ ಮಾಡಿ ಸಮರ್ಪಕ ಚರ್ಚೆಗೆ ಅವಕಾಶ ನೀಡುತ್ತೇನೆ. ಸದನದ ಹೊರಗಿನ ವಿಚಾರಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಷೀರುದ್ದೀನ್, ರವಿ ಪಾಟೀಲ್, ಶ್ರೀದೇವಿ ನಾಯಕ, ಫಿರೋಜ್ ಹಮ್‌ರಾಜ್ ಉಪಸ್ಥಿತರಿದ್ದರು.