ಮಕ್ಕಳ ರಕ್ಷಣಾ ನೀತಿ ಪರಿಣಾಮಕಾರಿ ಅನುಷ್ಠಾನಕ್ಕೆ ಕರೆ

udp-10-workshop
Published on

ಉಡುಪಿ: ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮಕ್ಕಳ ರಕ್ಷಣೆಗೆ ಹಲವಾರು ಕಾನೂನು ಹಾಗೂ ಕಾಯಿದೆಗಳನ್ನು ಜಾರಿಗೆ ತಂದಿದ್ದು, ಅಧಿಕಾರಿಗಳು ಇವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್​ ಎಸ್​. ಗಂಗಣ್ಣವರ್​ ಹೇಳಿದರು.

ಮಂಗಳವಾರ ಮಣಿಪಾಲ ರಜತಾದ್ರಿಯ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್​ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ನೀತಿಗೆ ಸಂಬಂಧಪಟ್ಟ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅನುಷ್ಠಾನಾಧಿಕಾರಿಗಳಿಗೆ ಮಿಷನ್​ ವಾತ್ಸಲ್ಯ, ಬಾಲನ್ಯಾಯಕಾಯ್ದೆ, ದತ್ತು ಅಧಿನಿಯಮ, ಪೋಕ್ಸೋ ಕಾಯ್ದೆ-, ಬಾಲ್ಯವಿವಾಹ ನಿಷೇಧ ಕಾಯ್ದೆ-, ಮಕ್ಕಳ ರಕ್ಷಣಾ ಸಮಿತಿ ರಚನೆ ಹಾಗೂ ಕಾರ್ಯವೈಖರಿ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿಯ ವ್ಯಕ್ತಿತ್ವದ ನಿಮಾರ್ಣದಲ್ಲಿ ಬಾಲ್ಯದ ಜೀವನ ಅನುಭವ ಪ್ರಮುಖ ಪಾತ್ರ ವಹಿಸುತ್ತದೆ. ಬಾಲ್ಯ ಜೀವನವನ್ನು ಕಳೆದುಕೊಂಡ ವ್ಯಕ್ತಿಯ ವ್ಯಕ್ತಿತ್ವಕ್ಕಿಂತ, ಸಮಾಜದ ಕಟ್ಟುಪಾಡುಗಳನ್ನು ಅರಿತು ಬೆಳೆದವರು ಸಾಮಾಜಿಕ ಜೀವನದಲ್ಲಿ ಹೆಚ್ಚು ಯಶಸ್ಸು ಕಂಡುಕೊಂಡಿದ್ದಾರೆ. ಬಾಲ್ಯದ ಜೀವನಕ್ಕೆ ಪೂರಕ ವಾತಾವರಣ ಕಲ್ಪಿಸಿದಾಗ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಗುವಿನ ಬೆಳವಣಿಗೆಯಲ್ಲಿ ಸಾಮಾಜೀಕರಣ ಪ್ರಕ್ರಿಯೆಯು ಮಹತ್ತರ ಪಾತ್ರ ವಹಿಸುತ್ತದೆ. ವಿವಿಧ ಹಂತಗಳಲ್ಲಿ ಮಕ್ಕಳ ಜೊತೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸೂಕ್ಷ$್ಮ ರೀತಿಯಲ್ಲಿ ವರ್ತಿಸಬೇಕು. ತರಬೇತುದಾರರು ಕಾನೂನಿನ ಅಂಶಗಳನ್ನು ತಿಳಿಯುವುದರೊಂದಿಗೆ ಮಕ್ಕಳ ಮನಸ್ಥಿತಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ. ಅರುಣ್​ ಕೆ ಮಾತನಾಡಿದರು. ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ, 2ನೇ ಹೆಚ್ಚುವರಿ ಸಿವಿಲ್​ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಜಿಲ್ಲಾ ಬಾಲನ್ಯಾಯ ಮಂಡಳಿಯ ಪ್ರಧಾನ ನ್ಯಾಯಾಧೀಶ ಮನು ಪಟೇಲ್​ ಬಿ.ವೈ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಮತ್ತಿತರರು ಉಪಸ್ಥಿತರಿದ್ದರು.

ಯುನಿಸೆಫ್​ ಕೊಪ್ಪಳ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ. ರಾಘವೇಂದ್ರ ಭಟ್​ ಮತ್ತು ಬೆಂಗಳೂರು ಕೆಸ್ಟ್​ ಯುನಿವರ್ಸಿಟಿಯ ಮನಶಾಸ್ತ್ರ ವಿಭಾಗದ ಸಹಾಯಕ ಭೋಧಕಿ ಡಾ.ವೀಣಾಶ್ರೀ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್​ ಸ್ವಾಗತಿಸಿ, ಚೈಲ್ಡ್​ಲೈನ್​ನ ಯೋಜನಾ ಸಂಯೋಜಕಿ ಜ್ಯೋತಿ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net