

ಬೆಳ್ತಂಗಡಿ: ಮಹಿಳೆಯರ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ರಚಿಸಲಾಗಿರುವ ಗೆಳತಿ ಆಪ್ತಸಲಹಾ ಸಮಿತಿಗಳನ್ನು ಸದ್ಯದಲ್ಲಿಯೇ ಜಿಲ್ಲಾಮಟ್ಟ ಹಾಗೂ ತಾಲೂಕುಮಟ್ಟಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆ ಹೇಳಿದರು.
ಧರ್ಮಸ್ಥಳದಲ್ಲಿ ಗುರುವಾರ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಯೋಜನಾಧಿಕಾರಿಗಳು ಮತ್ತು ಜಿಲ್ಲಾ ಸಮನ್ವಯಾಧಿಕಾರಿಗಳ ಗೆಳತಿ ಕಾರ್ಯಕ್ರಮದ ಆಪ್ತಸಮಾಲೋಚನಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ರಾಜ್ಯದಲ್ಲಿ ಏಳು ಪ್ರಾದೇಶಿಕ ವ್ಯಾಪ್ತಿಯಲ್ಲಿ ಗೆಳತಿ ಆಪ್ತಸಮಾಲೋಚನಾ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಈ ಸಮಿತಿಯಲ್ಲಿ ವಕೀಲರು, ಸ್ತ್ರೀರೋಗ ತಜ್ಞರು, ಮನೋವಿಜ್ಞಾನಿಗಳು, ಪೊಲೀಸ್ ಅಧಿಕಾರಿಗಳು ಇದ್ದು, ಆಪ್ತಸಮಾಲೋಚನೆ ಮೂಲಕ ಸೌಹಾರ್ದಯುತವಾಗಿ ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್‌ಕುಮಾರ್ ಮತ್ತು ಹಣಕಾಸು ಅಧಿಕಾರಿ ಶಾಂತಾರಾಮ ಪೈ ಉಪಸ್ಥಿತರಿದ್ದರು.