

ಕೊಪ್ಪಳ:ಗ್ರಾಮದ ಪ್ರತಿಯೊಬ್ಬರಿಗೂ ಸ್ವಚ್ಛ ಪರಿಸರದ ಬಗ್ಗೆ ಅರಿವು ಮೂಡಿಸಿ ಎಂದು ತಾಪಂ ಇಒ ದುಂಡಪ್ಪ ತುರಾದಿ ಸ್ವಚ್ಛತಾ ಸಿಬ್ಬಂದಿಗೆ ಸೂಚಿಸಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಸ್ವಚ್ಛತಾಗಾರರಿಗೆ ಸೋಮವಾರ ಹಮ್ಮಿಕೊಂಡಿದ್ದ ಸುರಕ್ಷತೆ ಮತ್ತು ಘನತೆ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮ ಸ್ವಚ್ಛವಾಗಿರಲು ಸ್ವಚ್ಛತಾ ಸಿಬ್ಬಂದಿ ಶ್ರಮ ಅಧಿಕ. ಸ್ವಚ್ಛತಾ ಕೆಲಸ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ನಿಮ್ಮ ಕೆಲಸದೊಂದಿಗೆ ಜನರಿಗೂ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿ. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸುತ್ತಲಿನ ವಾತಾವರಣವನ್ನು ಶುದ್ಧವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.
ಎಲ್ಲೆಂದರಲ್ಲಿ ಕಸ ಹಾಕದೆ; ಒಣ ಮತ್ತು ಹಸಿ ಕಸ ಬೇರ್ಪಡಿಸಿ ಸ್ವಚ್ಛ ವಾಹಿನಿಗೆ ನೀಡಬೇಕು. ಕಸ ಬೇರ್ಪಡಿಸುವಾಗ ವೈಯಕ್ತಿಕ ಸುರಕ್ಷತಾ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಅಧಿಕ. ನೀವು ಕೆಲಸ ಮಾಡುವಾಗ ಸ್ವಚ್ಛತಾ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.
ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ ಎಚ್., ತರಬೇತುದಾರೆ ಬಸಮ್ಮ ಹುಡೇದ್, ಸಿಬ್ಬಂದಿ ವೆಂಕಟೇಶ, ಶೇಖರಪ್ಪ ಮಡಿವಾಳರ, ಸೋಮಶೇಖರ, ಅಕ್ಷಯ ಕುಮಾರ, ಸ್ವಚ್ಛ ಭಾರತ ಮಿಷಿನ್ ಜಿಲ್ಲಾ ಸಮಾಲೋಚಕ ಮಾರುತಿ ನಾಯಕ ಇತರರಿದ್ದರು.