

ವಿಜಯವಾಣಿ ಸುದ್ದಿಜಾಲ ಧಾರವಾಡ
ನೀರಾವರಿ ಕಾಯ್ದೆಗೆ ತಿದ್ದುಪಡಿ ತರುವ ವಿಷಯಕ್ಕೆ ಸಂಬಂಧಿಸಿ ನೀರಾವರಿ ಇಲಾಖೆಯ ನಿವೃತ್ತ ಇಂಜಿನಿಯರ್ ಮಲ್ಲಿಕಾರ್ಜುನ ಗುಂಗೆ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆಯೊಂದು ನಡೆಯಲಿದ್ದು, ರಾಜ್ಯದಲ್ಲಿ ನೀರಾವರಿ ವ್ಯವಸ್ಥೆ ಬಲಪಡಿಸಲು ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ವಾಲ್ಮಿ ಹಾಗೂ ಇತರ ಪರಿಣಿತರೊಂದಿಗೆ ಚರ್ಚಿಸಿ ನೀರಾವರಿ ವ್ಯವಸ್ಥೆಗೆ ಕಾಯಕಲ್ಪ ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ಮಲಪ್ರಭಾ ನೀರಾವರಿ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಅಶೋಕ ವಾಸನದ ಹೇಳಿದರು.
70ನೇ ಅಖಿಲ ಭಾರತ ಸಹಕಾರ ಸಪ್ತಾಹ ನಿಮಿತ್ತ ನಗರದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಇಲಾಖೆಗಳ ಆಶ್ರಯದಲ್ಲಿ ವಾಲ್ಮಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೀರು ಬಳಕೆದಾರರ ಸಹಕಾರ ಸಂಘಗಳನ್ನು ಸ್ಥಾಪಿಸಿ ಸಹಭಾಗಿತ್ವ ನೀರಾವರಿ ಪದ್ಧತಿ ಜಾರಿಗೆ ಆದ್ಯತೆ ನೀಡುವುದು ಮಾತ್ರ ನೀರಾವರಿಯನ್ನು ಸಮರ್ಥ ಹಾಗೂ ವ್ಯವಸ್ಥಿತವಾಗಿ ಜಾರಿಗೆ ತರಲು ಸೂಕ್ತ ಪರಿಹಾರ. ಹೀಗಾಗಿ ನೀರಾವರಿ ಸಹಕಾರ ಸಂಘಗಳು ಬೆಳೆಯಬೇಕಿದೆ ಎಂದು ಸಲಹೆ ನೀಡಿದ ಅವರು, ಸ್ವಯಂ ಚಾಲಿತ ಗೇಟ್‌ಗಳನ್ನು ಅಳವಡಿಸಿ ನೀರನ್ನು ಮಿತವ್ಯಯದಿಂದ ಬಳಸುವ ಕುರಿತು ರೈತರಿಗೆ ತರಬೇತಿ ನೀಡುವುದು, ಆಧುನಿಕ ತಂತ್ರಜ್ಞಾನ ಬಳಸಿ ಕಡಿಮೆ ನೀರಿನಲ್ಲಿ ಅತಿ ಹೆಚ್ಚು ಬೆಳೆ ಬೆಳೆಯುವ ದಿಸೆಯಲ್ಲಿ ರೈತರಿಗೆ ತರಬೇತಿ ನೀಡುವುದು ಅಗತ್ಯ ಎಂದರು.
ಸದಾಶಿವಗೌಡ ಪಾಟೀಲ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಂಕರಪ್ಪ ರಾಯನಾಳ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷೆ ಗೀತಾ ಕುಂಬಿ, ನಿರ್ದೇಶಕ ಬಿ.ಎ. ಪಾಟೀಲ, ತೇಜೋಮೂರ್ತಿ ಮಾತನಾಡಿದರು. ವಾಲ್ಮಿ ನಿರ್ದೇಶಕ ಬಸವರಾಜ ಬಂಡಿವಡ್ಡರ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಬಸವರಾಜ ಪೂಜಾರ ಸ್ವಾಗತಿಸಿದರು. ಮಹಾದೇವ ಹುತ್ತನಗೌಡರ ನಿರೂಪಿಸಿದರು. ಪ್ರಭಾಕರ ಹಾದಿಮನಿ ವಂದಿಸಿದರು.